

ಚನ್ನರಾಯಪಟ್ಟಣ: ಮಕ್ಕಳು, ಪಾಲಕರ ಬಗ್ಗೆ ಮುತುವರ್ಜಿ ವಹಿಸಿ ಅವರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಹಾಸನ ಮತ್ತು ಕೊಡಗು ಆದಿಚುಂಚನಗಿರಿ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿಗಳು ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸಿರುತ್ತಾರೆ. ಅವರ ಬಗ್ಗೆ ಮುತುವರ್ಜಿ ವಹಿಸುವುದು ಮಕ್ಕಳ ಕರ್ತವ್ಯ. ಈಗಿನ ಕಾಲಘಟ್ಟದಲ್ಲಿ ಮನುಷ್ಯ ಒತ್ತಡ ಹಾಗೂ ಆಧುನಿಕ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ನರಳುತ್ತಿದ್ದಾನೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸಬಹುದು. ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಅನಾರೋಗ್ಯದಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.
ಗ್ರಾಮೀಣ ಹಾಗೂ ನಗರದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ. ಪಾಲಕರು, ಸಾರ್ವಜನಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿಧಿಕಾರಿ ಡಾ.ವಿ.ಮಹೇಶ್ ಮಾತನಾಡಿದರು. ಶಿಬಿರದಲ್ಲಿ 1000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. 130 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ಸತ್‌ಕೀರ್ತಿನಾಥ ಸ್ವಾಮೀಜಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ಮಂಜುನಾಥ್, ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವೇಂದ್ರ, ಶಿವಕುಮಾರ್, ಬಿ.ಜಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿ, ಭಾರತೀಯ ಯುವ ರೆಡ್ ಕ್ರಾಸ್, ಎನ್.ಎಸ್.ಎಸ್, ಸೈಟ್ಸ್ ಗೈಡ್ಸ್, ಎನ್.ಸಿ.ಸಿ, ಯು.ಬಿ.ಎ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.