ಶಿಥಿಲಗೊಂಡಿದ್ದ ಶಾಲೆಗೆ ಹೊಸ ರೂಪ

PH 05
Published on

ವಿಜಯವಾಣಿ ವಿಶೇಷ ಯಡ್ರಾಮಿ
ಸಂಬಂಧಿತರ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಹೊಸ ರೂಪ ನೀಡಿದ್ದಾರೆ. ಅಲ್ಲದೆ ತಾವೇ ಆಳಾಗಿ ದುಡಿದು ಅಕ್ಷರ ಕಲಿತ ವಿದ್ಯಾ ದೇಗುಲಕ್ಕೆ ಅಳಿಲು ಸೇವೆ ಸಲ್ಲಿಸಿ ಮಾದರಿ ಎನಿಸಿದ್ದಾರೆ.

ಹೌದು. ಸಾಥಖೇಡ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಇದೀಗ ಹೊಸಕಳೆ ಬಂದಿದೆ. 263 ವಿದ್ಯಾರ್ಥಿಗಳು ಅಭ್ಯಸಿಸುತ್ತಿರುವ ಶಾಲೆಯಲ್ಲಿ ಮುಖ್ಯ ಶಿಕ್ಷಕಿ, ನಾಲ್ವರು ಕಾಯಂ ಮತ್ತು ಮೂವರು ಅತಿಥಿ ಶಿಕ್ಷಕರಿದ್ದಾರೆ.

ಹಲವಾರು ವರ್ಷಗಳಿಂದ ಶಾಲೆ ದುರಸ್ತಿಗಾಗಿ ಇಲಾಖೆ ಹಾಗೂ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸುತ್ತ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೇಸತ್ತ ಶಿಕ್ಷಕರು ಶಾಲೆಯ ಸ್ಥಿತಿಯನ್ನು ಹಳೆಯ ವಿದ್ಯಾರ್ಥಿಗಳ ಗಮನಕ್ಕೆ ತಂದರು. ಎರಡ್ಮೂರು ದಿನದಲ್ಲೇ ಎಲ್ಲ ಹಳೆಯ ವಿದ್ಯಾರ್ಥಿಗಳು ಸೇರಿ ಹಣ ಸಂಗ್ರಹಿಸಿ ದುರಸ್ತಿ ಮೂಲಕ ಸುಂದರೀಕರಣಕ್ಕೆ ಮುಂದಾದರೆ, ಗ್ರಾಮಸ್ಥರು ಸುಣ್ಣ-ಬಣ್ಣ ನೋಡಿಕೊಂಡಿದ್ದಾರೆ. ತಾವೇ ಆಳುಗಳಾಗಿ ದುಡಿದ ಹಳೇ ವಿದ್ಯಾರ್ಥಿಗಳು ಲೈಟ್ ಫಿಟಿಂಗ್, ಬಣ್ಣ, ಸಿಮೆಂಟ್ ಲೇಪನ ಸೇರಿ ಎಲ್ಲ ಕೆಲಸ ಮಾಡಿದ್ದಾರೆ. ಈ ಮೂಲಕ ತಾವು ಕಲಿತ ಶಾಲೆಗೆ ನವಕಳೆ ತಂದುಕೊಟ್ಟಿದ್ದಾರೆ.

ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರು ಮತ್ತ ಸುತ್ತಮುತ್ತಲಿನ ಹಳ್ಳಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ಗ್ರಾಮಗಳಲ್ಲೂ ಕೆಲಸವಾದರೆ ಶಾಲೆಗಳು ಸುಸ್ಥಿತಿಯಲ್ಲಿ ಇರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳ ಇಚ್ಛಾಶಕ್ತಿ ಮತ್ತು ಕಲಿತ ಶಾಲೆ ಮೇಲಿರುವ ಪ್ರೀತಿಯಿಂದಾಗಿ ಶಿಥಿಲಗೊಂಡ ಸ್ಕೂಲ್ ಸಂಪೂರ್ಣ ಹೊಸ ರೂಪ ಪಡೆದುಕೊಂಡಿದೆ.

ಸಮುದಾಯದ ಸಹಕಾರವಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಹಳೇ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಶಾಲೆಯಲ್ಲಿರುವ ಮಕ್ಕಳಿಗೆ ಆಟವಾಡಲು ಸ್ಥಳದ ಕೊರತೆ ಹಾಗೂ ಸ್ಮಾರ್ಟ್ ಕ್ಲಾಸ್ ಅವಶ್ಯಕವಿದ್ದು, ದಾನಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾದರೆ ಅನುಕೂಲವಾಗುತ್ತದೆ.
| ಗಂಗೂಬಾಯಿ ಕುಲಕರ್ಣಿ ಮುಖ್ಯ ಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net