

ಬೀದರ್: ಜಿಲ್ಲೆಯಲ್ಲಿ ಹಲವು ಸರ್ಕಾರಿ ಶಾಲೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಜೀವ ಭಯದಿಂದ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳಿವೆ. ಹೀಗಾಗಿ ಎಷ್ಟು ಶಾಲೆ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ ಎಂಬ ಪಟ್ಟಿ ಸಿದ್ಧಪಡಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ಯಾವ ಶಾಲೆ ಕೊಠಡಿ ಶಿಥಿಲಗೊಂಡಿದೆ? ದುರಸ್ತಿ ಮಾಡಬಹುದೆ ಅಥವಾ ನೆಲಸಮಗೊಳಿಸಬೇಕೇ ಎಂಬ ಬಗ್ಗೆ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.
ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳ ಗುಣಮಟ್ಟದ ಖಾತ್ರಿಗೆ ಡಿಸಿ, ಜಿಪಂ ಸಿಇಒ, ಎಸಿ, ಎಡಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಮಾಣೀಕರಿಸಬೇಕು. ಮುಖ್ಯಮಂತ್ರಿಗಳು ೨೦೨೫ ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳ ಗುಣಮಟ್ಟದ ಬಗ್ಗೆ ಜಿಲ್ಲಾಡಳಿತ ನಿಗಾ ಇಡಬೇಕು ಎಂದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಕ್ಲಸ್ಟರ್ ರಚಿಸಿ ಆಂಗ್ಲ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ ವಿಷಯ ತಜ್ಞ ಬೋಧಕರಿಂದ ಪರೀಕ್ಷೆಗೆ ಸಿದ್ಧತೆ ಮಾಡಿಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಅಪ್ರಾಪ್ತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ಪೊಲೀಸರು ತ್ವರಿತಗೊಳಿಸಬೇಕು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಕಠಿಣ ಶಿಕ್ಷೆ ಆದರೆ ಮಾತ್ರ ಇಂಥ ಘಟನೆ ಮರುಕಳಿಸದಂತೆ ತಡೆಯಲು ಸಾಧ್ಯ ಎಂದ ಖಂಡ್ರೆ, ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ತುರ್ತು ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ, ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ., ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಇತರರಿದ್ದರು.
ಬೆಳೆ ಹಾನಿ ಪರಿಹಾರ ಕೊಡಿ: ಬೀದರ್ ದಕ್ಷಿಣ ಕ್ಷೇತ್ರ ಸೇರಿ ಜಿಲ್ಲೆಯ ವಿವಿಧೆಡೆ ಜಿಂಕೆ ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸಮೃದ್ಧವಾಗಿ ಬಂದ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ. ಹೀಗಾಗಿ ಬೆಳೆ ಹಾನಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಲಗಳಿಗೆ ಜಿಂಕೆ, ಕಾಡು ಹಂದಿಗಳು ಲಗ್ಗೆ ಇಡುತ್ತಿವೆ. ಈ ಬಗ್ಗೆ ಹಿಂದೆಯೂ ಸಭೆ ಗಮನಕ್ಕೆ ತಂದಿರುವೆ. ಹೊಲಗಳಿಗೆ ಸೋಲಾರ್ ತಂತಿ ಅಳವಡಿಕೆ ಸಂಬಂಧ ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ ಸ್ಪಂದನೆ ಇಲ್ಲ. ಬೆಳೆ ರಕ್ಷಣೆಗೆ ಸೋಲಾರ್ ತಂತಿ ಬೇಲಿ ಅಳವಡಿಕೆ ಜರೂರಿಯಿದೆ. ಅರಣ್ಯ ಸಚಿವರಾದ ಖಂಡ್ರೆ ತುರ್ತು ಕ್ರಮ ಜರುಗಿಸಬೇಕು ಎಂದರು. ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಅತಿಥಿ ಶಿಕ್ಷಕರಿಗೆ ಕೇವಲ ೧೦ ಸಾವಿರ ರೂ. ವೇತನ ನೀಡುತ್ತಿದ್ದು, ೨೦ ಸಾವಿರಕ್ಕೆ ಕೆಕೆಆರ್‌ಡಿಬಿ ಅನುದಾನದಡಿ ಹೆಚ್ಚಿಸಬೇಕು. ಜಿಲ್ಲೆಯ ರೈತರ ಜೀವನಾಡಿಯಾದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ)ಗೆ ಸರ್ಕಾರದಿಂದ ಅನುದಾನ ಕಲ್ಪಿಸಿ ಪುನಃ ಪ್ರಾರಂಭಿಸಿದರೆ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗ ಸಿಎಂ ಭೇಟಿ ಮಾಡಿ ಕಾರ್ಖಾನೆಗೆ ಆರ್ಥಿಕ ನೆರವು ನೀಡಲು ಮನವಿ ಮಾಡೋಣ ಎಂದು ಸಲಹೆ ನೀಡಿದರು.
ಮುಳೆ ಆರೋಪಕ್ಕೆ ಸಲಗರ ಅಸಮಾಧಾನ: ಬಸವಕಲ್ಯಾಣ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳಪೆ ನಡೆಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾಡಿದ ಆರೋಪಕ್ಕೆ ಶಾಸಕ ಶರಣ ಸಲಗರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಕೆಡಿಪಿ ಸಭೆಯಲ್ಲಿ ನಡೆಯಿತು. ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಬರುತ್ತಿದ್ದರೂ ಕಾಮಗಾರಿಗಳು ಗುಣಮಟ್ಟದಿಂದ ಏಕೆ ಆಗುತ್ತಿಲ್ಲ ಎಂದು ಮುಳೆ ಪ್ರಶ್ನಿಸಿದರು. ಇದರಿಂದ ಅಸಮಾಧಾನಗೊಂಡ ಸಲಗರ, ಆರೋಪ ಮಾಡುವುದು ಸರಿಯಲ್ಲ. ಕಳಪೆಯಾದರೆ ತೋರಿಸಿ. ಬಹುತೇಕ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿವೆ. ಎಲ್ಲೋ ಒಂದೆರಡು ಕಡೆ ಸಣ್ಣಪುಟ್ಟ ದೋಷ ಆಗಿರಬಹುದು. ಹಾಗಂತ ಎಲ್ಲವೂ ಕಳಪೆ ಎಂಬುದು ಸರಿಯಲ್ಲ ಎಂದರು. ಮಧ್ಯಪ್ರವೇಶಿಸಿದ ಸಚಿವ ಖಂಡ್ರೆ, ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಶಿಷ್ಟಾಚಾರ ಪಾಲಿಸದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ: ಹುಮನಾಬಾದ್ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಂದಾಯ ಇಲಾಖೆ ಸಿಬ್ಬಂದಿಗೆ ಲ್ಯಾಪ್‌ಟಾಪ್ ವಿತರಣೆ ಸಮಾರಂಭದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಸಂಬಂಧಿತರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಆಗ್ರಹಿಸಿದರು. ಕ್ಷೇತ್ರದಲ್ಲಿ ಪದೇಪದೆ ಇಂಥ ಪ್ರಸಂಗ ನಡೆಯುತ್ತಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಂಡ್ರೆ, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಖಾತ್ರಿಪಡಿಸಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಕನಿಷ್ಠ ಐದು ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಬೇಕು. ಕೈಗಾರಿಕೆ ಕ್ರಾಂತಿ ಮಾಡಲು ನೈಸರ್ಗಿಕ ಸಂಪನ್ಮೂಲವಿಲ್ಲ. ಹೀಗಾಗಿ ಯುವಕರಿಗೆ ಸೇವಾ ವಲಯದಲ್ಲಿ ಹೆಚ್ಚೆಚ್ಚು ಉದ್ಯೋಗ ಲಭಿಸುವಂತೆ ಅಣಿಗೊಳಿಸಲು ಕೌಶಲ ತರಬೇತಿ ನೀಡಲು ಕ್ರಮ ಕೈಗೊಳ್ಳಿ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ