

ಮುದ್ದೇಬಿಹಾಳ: ಪಟ್ಟಣದಲ್ಲಿ ಆರು ದಶಕಗಳ ಹಿಂದೆ ನಿರ್ಮಿಸಿದ್ದ ಕಾಯಿಪಲ್ಲೆ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆ ತೆರವು ಕಾರ್ಯಾಚರಣೆಯನ್ನು ಕೊನೆಗೂ ಮಂಗಳವಾರದಿಂದ ಆರಂಭಿಸಲಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಈ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿತ್ತು. ಅಲ್ಲದೇ ಅಂಗಡಿಕಾರರನ್ನು ತೆರವುಗೊಳಿಸಲು ಅಧಿಕಾರಿಗಳು ನಾಲ್ಕೈದು ಬಾರಿ ನೋಟಿಸ್ ಕೊಟ್ಟಿದ್ದರು. ಜಿಲ್ಲಾಧಿಕಾರಿ ಈ ಮಳಿಗೆಗಳನ್ನು ನೆಲಸಮಗೊಳಿಸಲು ಆದೇಶಿಸಿದ್ದರು. ಆದರೆ ಅಂಗಡಿಕಾರರು ಇನ್ನಷ್ಟು ಕಾಲಾವಕಾಶ ಕೋರುತ್ತಲೇ ಬಂದಿದ್ದರು.
ಆದರೆ ಸೋಮವಾರ ಸಂಜೆ ಮಾರುಕಟ್ಟೆಯ ಬಲಭಾಗದ ಎರಡು ಅಂಗಡಿಗಳ ಛಾವಣಿ ಸಿಮೆಂಟ್ ಕಳಚಿ ಬಿದ್ದು ಕೂದಲೆಳೆ ಅಂತರದಲ್ಲಿ ಅಲ್ಲಿದ್ದ ಅಂಗಡಿಕಾರರು ಪಾರಾಗಿದ್ದರು.
ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ತ್ವರಿತವಾಗಿ ಮಳಿಗೆಗಳನ್ನು ಖಾಲಿ ಮಾಡಲು ಅಲ್ಲಿದ್ದವರಿಗೆ ಸೂಚಿಸಿದರು. ಸದ್ಯಕ್ಕೆ ಎಲ್ಲ ಮಳಿಗೆಗಳನ್ನು ಬಾಡಿಗೆದಾರರು ಖಾಲಿ ಮಾಡಿದ್ದು ಜೆಸಿಬಿ ಬಳಸಿ ಶಿಥಿಲ ಮಾರುಕಟ್ಟೆಯನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಪಿಎಸ್‌ಐ ಆರೀಫ ಮುಶಾಪುರಿ ಅವರು ಅಗತ್ಯ ಪೊಲೀಸ್ ಭದ್ರತೆ ಒದಗಿಸಿದ್ದರು. ಆರು ದಶಕಗಳ ಹಿಂದೆ ನಿರ್ಮಿಸಿದ್ದ ಶಿಥಿಲಗೊಂಡ ಮಾರುಕಟ್ಟೆ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದ್ದು ಸಾರ್ವಜನಿಕರ ನಿಟ್ಟುಸಿರು ಬಿಡಲು ಕಾರಣವಾಗಿದೆ. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ಎಂ. ಖಿಲಾರಿ ಹಾಗೂ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.