

ಭಾಲ್ಕಿ: ಮಳಚಾಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು.
೪ ಮತ್ತು ೫ನೇ ತರಗತಿ ಶಿಥಿಲಾವಸ್ಥೆಯ ಕೋಣೆಗಳಲ್ಲಿ ವಿದ್ಯಾರ್ಥಿಗಳು ಬೋಧನೆ ಮಾಡುತ್ತಿರುವುದು ಕಂಡು ಬಂದಿತು. ಮಳೆಗಾಲದ ದಿನಗಳಲ್ಲಿ ಶಿಥಿಲಗೊಂಡ ಕೋಣೆಗಳಲ್ಲಿ ವಿದ್ಯಾರ್ಥಿಗಳು ಪಾಠ ಮಾಡಲು ಹೇಗೆ ಸಾಧ್ಯ ಎಂದು ಸ್ಥಳದಲ್ಲಿದ್ದ ಬಿಇಒಗೆ ಪ್ರಶ್ನಿಸಿದರು.
ಹೊಸ ತರಗತಿ ಕೋಣೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಇಒ ಸಿ.ಜಿ.ಹಳ್ಳದ ಮಾಹಿತಿ ನೀಡಿದರು.
ತರಗತಿ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸುಸ್ಥತಿಯಲ್ಲಿರುವ ಮುಖ್ಯಗುರು ಕೋಣೆ ಮತ್ತು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಕೂಡಲೇ ತರಗತಿ ಸ್ಥಳಾಂತರಿಸಿ ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು ಎಂದು ಸೂಚನೆ ನೀಡಿದರು.
ಮುಖ್ಯಗುರು ಕೂಡ ಮೇಲ್ಸುತ್ತವಾರಿ ಸರಿಯಾಗಿ ನೋಡುತ್ತಿಲ್ಲ. ಶಾಲಾ ಪರಿಸರದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಶಿಕ್ಷಕರು ಮಕ್ಕಳ ಹಾಜರಾತಿ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ಮುಖ್ಯಗುರು ಮತ್ತು ಶಿಕ್ಷಕರಿಗೆ ನೋಟಿಸ್ ನೀಡಿ ಆಯೋಗಕ್ಕೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಇಒ ಸಿ.ಜಿ.ಹಳ್ಳದ್, ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕನ್ನಾಳೆ ಇತರರಿದ್ದರು.
ಈ ಶಾಲೆ ಹೆಸರಿಗಷ್ಟೇ ಮಾದರಿ ಶಾಲೆಯಾಗಿದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲ. ಮಕ್ಕಳು ವಿವಿಧ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಶಿಥಿಲಗೊಂಡ ಕೋಣೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇರುವುದು ವಿಪರ್ಯಾಸ.
| ಶಶಿಧರ ಕೋಸಂಬೆ
ಸದಸ್ಯ,ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು