

ಶಿಗ್ಗಾಂವಿ: ಪಟ್ಟಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದರಿಂದ ರೋಗ ಹರಡುವ ಭೀತಿಯಲ್ಲಿ ಜನರು ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ಓಣಿಗಳನ್ನು ಸೀಲ್ಡೌನ್ ಮಾಡಿಕೊಳ್ಳುತ್ತಿದ್ದಾರೆ.
ಪಟ್ಟಣದಲ್ಲಿ ಪಾಸಿಟಿವ್ ಕಂಡುಬಂದ ವೃದ್ಧೆ ನಂಟಿನಿಂದ 17 ಜನರಿಗೆ ಸೋಂಕು ತಗುಲಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ. ದಿನಂಪ್ರತಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತು ಸೋಂಕಿತರ ಟ್ರಾವೆಲ್ ಹಿಸ್ಟರಿ ಕಂಡು ಜನರು ಮುಂದೆ ತಮಗೆಲ್ಲಿ ರೋಗ ಅಂಟಿಕೊಳ್ಳುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.
ಈಗಾಗಲೇ ಸೀಲ್ಡೌನ್ಗೆ ಒಳಪಟ್ಟಿರುವ ದೇಸಾಯಿ ಗಲ್ಲಿ, ಗೌಡರ ಓಣಿ, ಹಳೇಪೇಟೆಗಳಲ್ಲಿ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಅಲ್ಲಿನ ನಿವಾಸಿಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಇದರಿಂದ ವಿವಿಧ ಸಂಘ- ಸಂಸ್ಥೆಗಳು ಪಟ್ಟಣದಲ್ಲಿ ಲಾಕ್ಡೌನ್ ಮಾಡುವಂತೆ ತಹಸೀಲ್ದಾರರರಿಗೆ ಮನವಿ ಕೂಡ ಸಲ್ಲಿಸಿದ್ದರು. ಆದರೆ, ತಾಲೂಕಾಡಳಿತ ಲಾಕ್ಡೌನ್ಗೆ ಮುಂದಾಗದ್ದರಿಂದ ಜನರೇ ಸ್ವಯಂ ಪ್ರೇರಣೆಯಿಂದ ಸೀಲ್ಡೌನ್ಗೆ ಮುಂದಾಗುತ್ತಿದ್ದಾರೆ.
ಈಗಾಗಲೇ ಪಟ್ಟಣದ ಕಿರಾಣಿ ವ್ಯಾಪಾರಸ್ಥರ ಸಂಘ, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘಗಳು ಸ್ವಯಂ ನಿರ್ಬಂಧ ಘೊಷಿಸಿಕೊಂಡಿದ್ದಾರೆ. ಈಗ ಅಂಬೇಡ್ಕರ್ ನಗರ, ಮೆಹಬೂಬ್ ನಗರ ಸೇರಿ ಅನೇಕ ಓಣಿಗಳ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರು, ಬೇರೆ ಗ್ರಾಮ, ನಗರ, ಬಡಾವಣೆಗಳಿಂದ ತಮ್ಮ ಓಣಿಗಳಿಗೆ ಬರುವ ಜನರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಯಾರೊಬ್ಬರೂ ಒಳಬರದಂತೆ ತಡೆಯಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡಿದ್ದಾರೆ.