ಶಿಕ್ಷೆ ಪ್ರಮಾಣ, ದಂಡ ಹೆಚ್ಚಳಕ್ಕೆ ಆಕ್ರೋಶ

Protest
Published on

ಚಿತ್ರದುರ್ಗ: ಭಾರತೀಯ ನ್ಯಾಯ ಸಂಹಿತೆಯ 106 (1) ಮತ್ತು (2) ಕಾಯ್ದೆ ಅನ್ವಯ 10 ವರ್ಷ ಜೈಲು, 7ಲಕ್ಷ ರೂ. ದಂಡ ವಿಧಿಸುವ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಕೂಡಲೇ ಕಾಯ್ದೆ ಹಿಂಪಡೆಯಬೇಕು ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಈ ಹಿಂದೆ 106 (1) ಕಾಯ್ದೆಯೂ ಹಿಟ್ ಅಂಡ್ ರನ್ ಪ್ರಕರಣದಲ್ಲಿ 2ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಇದೀಗ ಹೊಸ 106 (2) ರಡಿ ಮುಂದುವರೆಸಿ, 10ವರ್ಷ ಜೈಲು ಶಿಕ್ಷೆ, 7 ಲಕ್ಷ ರೂ. ದಂಡ ವಿಧಿಸುವ ಕಾಯ್ದೆ ಅತ್ಯಂತ ಅಮಾನವೀಯ. ಇದು ಚಾಲಕರ ಮೇಲಿನ ಶೋಷಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಲೀಕರು, ಚಾಲಕರ ಹಿತದೃಷ್ಟಿ ಮತ್ತು ಮಾನವೀಯತೆ ದೃಷ್ಟಿಯಿಂದ ಈ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಬೇಡಿಕೆಗೆ ಸ್ಪಂದಿಸುವವರೆಗೂ ಮಾಲೀಕರು, ಚಾಲಕರು ಬೀದಿಗಿಳಿದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಬಿ.ಪ್ರಭು, ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜು, ವಿಶ್ವಣ್ಣ, ಕೇಶವ್, ರಘುನಾಥ್, ಮಂಜುನಾಥ್, ಉಸ್ಮನ್ ಶರೀಫ್, ಮಹಮ್ಮದ್ ನಸರುಲ್ಲಾ ಸೇರಿ 200ರಿಂದ 300 ಮಂದಿ ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net