

ತಿ.ನರಸೀಪುರ: ಆಧುನಿಕ ಸಮಾಜದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ, ಶೈಕ್ಷಣಿಕ ಮಟ್ಟ ಹೆಚ್ಚಾದಂತೆ ಮೌಢ್ಯ ಹಾಗೂ ಕಂದಾಚಾರಗಳ ಆಚರಣೆ ಹೆಚ್ಚಾಗುತ್ತಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎವಿಎಸ್‌ಎಸ್ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆಲ್ಲ ಮೌಢ್ಯ, ಧಾರ್ಮಿಕ ಮತ್ತು ಕಂದಾಚಾರಗಳ ಆಚರಣೆಗಳು ಹೆಚ್ಚಾಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನಿಗಳು ಮತ್ತು ಉನ್ನತ ಹುದ್ದೆ ಪಡೆದ ದೊಡ್ಡ ವ್ಯಕ್ತಿಗಳು ಕೂಡ ಮೌಢ್ಯಗಳ ಆಚರಣೆಯಲ್ಲಿ ತೊಡಗುತ್ತಿರುವುದು ನಾಗರಿಕ ಸಮಾಜದ ದೊಡ್ಡ ದುರಂತ ಎಂದರು.
ಜಾಗತಿಕ ಕಾಲಘಟ್ಟಕ್ಕೆ ಹೊಂದುವಂತೆ ಇಂದಿನ ವಿದ್ಯಾರ್ಥಿಗಳು ಮೂಢನಂಬಿಕೆ, ಮೌಢ್ಯಗಳ ಮೇಲೆ ನಂಬಿಕೆ ಇರಿಸದೆ ವೈಜ್ಞಾನಿಕವಾಗಿ ತಮ್ಮ ಸ್ವಸಾಮರ್ಥ್ಯ ಮೇಲೆ ನಂಬಿಕೆ ಇಟ್ಟು ಚೆನ್ನಾಗಿ ಓದಿ ಉನ್ನತ ಶಿಕ್ಷಣ ಪಡೆಯಲು ಶ್ರಮಿಸಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಷ್ ಮಾತನಾಡಿ, ಮಕ್ಕಳ ಪ್ರತಿಭೆ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಸಾಧನೆ ಮಾಡಿ. ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು ಎಂದರು.
ಬೌದ್ಧ ವಿಹಾರದ ಬೋಧಿರತ್ನ ಬಂತೇಜಿ, ಪುರಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯೆ ಬೇಬಿ ಹೇಮಂತ್, ತಾಲೂಕು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಶಂಕರಯ್ಯ, ಕಾರ್ಯದರ್ಶಿ ಮುರಳೀಧರ್, ಉಪಾಧ್ಯಕ್ಷ ಸಿದ್ದರಾಜು, ಖಜಾಂಚಿ ರಾಜಪ್ಪ, ಸಂಘಟನಾ ಕಾರ್ಯದರ್ಶಿ ಮಹೇಶ್ ಮೂರ್ತಿ, ಮುಖಂಡರಾದ ಸಿ.ಮಹದೇವಸ್ವಾಮಿ, ನಾಗೇಶ್, ನಾಗರಾಜು, ಸಿದ್ದರಾಜು, ನಾರಾಯಣಮೂರ್ತಿ, ನಾಗೇಂದ್ರ, ಪ್ರಸನ್ನ, ಪ್ರಕಾಶ, ಸೋಮಶೇಖರ, ಪಿ.ಕುಮಾರಸ್ವಾಮಿ, ಮಹದೇವಯ್ಯ, ರುದ್ರಯ್ಯ, ಹೊಸಹಳ್ಳಿ ಸಿದ್ದರಾಜು, ಅನಿಲ್ ರಾಜು, ಲಿಂಗರಾಜು, ಮಂಜುನಾಥ್ ಇನ್ನಿತರರು ಇದ್ದರು.