ದಾವಣಗೆರೆ: ಅಂಗವಿಕಲರ ಸಮಸ್ಯೆಗೆ ಶಿಕ್ಷಣವೇ ಪರಿಹಾರ. ಅದರ ಮೂಲಕ ಅವರೇ ಅನ್ನದ ದಾರಿ ಕಂಡುಕೊಳ್ಳುವಂತೆ ಸಾಮರ್ಥ್ಯ ತುಂಬಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ ನಾಯಕ ಹೇಳಿದರು.
ನಗರದ ವಿಕಲಾಂಗರ ಪ್ರಾದೇಶಿಕ ಪುನಶ್ಚೇತನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ವಿವಿಧ ಇಲಾಖೆಗಳಲ್ಲಿ ಶೇ.5ರ ಅನುದಾನದ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಾಂಗರು ಸ್ವಾವಲಂಬಿ ಜೀವನ ಕಂಡುಕೊಳ್ಳುವಂತೆ ಎಲ್ಲರೂ ಶ್ರಮಿಸಬೇಕು. ಅವರು ಜೀವಿನವಿಡೀ ಮತ್ತೊಬ್ಬರನ್ನು ಅವಲಂಬಿಸದಂತೆ ಸರ್ಕಾರ, ಸಂಘ ಸಂಸ್ಥೆಗಳ ಯೋಜನೆಗಳನ್ನು ಬಳಸಿಕೊಳ್ಳಲು ಉತ್ತೇಜಿಸಬೇಕು ಎಂದು ಹೇಳಿದರು.
ಸಾಧಿಸುವ ಛಲ ಮತ್ತು ದೃಢ ಸಂಕಲ್ಪ ಜತೆಗಿದ್ದಲ್ಲಿ ಸಾಧನೆಯ ಹಾದಿ ಕಷ್ಟಕರವಲ್ಲ. ಕಷ್ಟಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರವನ್ನು ತಲುಪಿದ ಸಾಧಕರ ಸಾಲಿನಲ್ಲಿ ವಿಕಲಾಂಗರು ನಿಲ್ಲಬೇಕೆಂದು ಹೇಳಿದರು.
ಹಿರಿಯ ನ್ಯಾಯವಾದಿ ಎಲ್.ಎಚ್.ಅರುಣಕುಮಾರ್ ಮಾತನಾಡಿ, ವಿಕಲಾಂಗರ ಬಗ್ಗೆ ಸಮಾಜ ಹೊಂದಿರುವ ಧೋರಣೆ ಬದಲಾಗಬೇಕು. ಅಂಗವಿಕಲರನ್ನೂ ಸಾಮಾನ್ಯ ಮನುಷ್ಯರೆಂದು ಕಾಣುವ ಮನೋಭಾವ ಬೆಳೆಯಬೇಕು. ಅವರಿಗೆ ಅನುಕಂಪ ತೋರದೆ, ವಿವಿಧ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ್ ಮಾತನಾಡಿ, ವಿಕಲಚೇತನರ ಸಂಘಟನೆಗಳು ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ಮುಂದಾಗಿ ಅರ್ಹ ವಿಕಲಾಂಗರಿಗೆ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿ.ಪಂ ಮತ್ತು ತಾ.ಪಂ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್‌ಫೋರ್ಸ್ ಸಮಿತಿಯ ಜಿಲ್ಲಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ.ವೀರೇಶ್, ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್ ಪೋರ್ಸ್‌ನ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಜಿಲ್ಲಾಧ್ಯಕ್ಷ ಹೊನ್ನಪ್ಪ ಆಜ್ಜೋಳ, ಶಿವಪ್ಪ, ಸಾಧನಾಶ್ರಮದ ಡಾ.ಪುಷ್ಪಲತಾ, ಹರೀಶ್‌ಹಳ್ಳಿ, ಫಾಸ್ಟರ್ ಇಮ್ಯಾನುವೆಲ್, ಯಾಸಿನ್ ಶರೀಫ್, ಪ್ರೊ.ಸೆಲ್ವನ್, ನಾಗಭೂಷಣ್, ಗಣೇಶ್ ಇತರರಿದ್ದರು. ಇದೇ ವೇಳೆ ಸಾಧಕ ವಿಕಲಾಂಗರನ್ನು ಸನ್ಮಾನಿಸಲಾಯಿತು.
---