

ಚಾಮರಾಜನಗರ: ಎಲ್ಲ ಮಕ್ಕಳೂ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕಾಗಿರುವುದು ಪಾಲಕರ ಕರ್ತವ್ಯ. ಆದರೆ ಈ ಪಾಲಕರಿಗೆ ಶಿಕ್ಷಣ ಮತ್ತು ತುತ್ತು ಅನ್ನದ ಆಯ್ಕೆ ಬಂದಾಗ ತುತ್ತಿನ ಚೀಲ ತುಂಬಿಸುವುದೇ ಮುಖ್ಯವಾಗುತ್ತಿದೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಬ್ಬು ಕಟಾವು ಮಾಡಲು ಬಳ್ಳಾರಿ, ಕೊಪ್ಪಳದಿಂದ ವಲಸೆ ಕಾರ್ಮಿಕರು ಬಂದಿದ್ದಾರೆ. ಇವರಿಗೆ ಇರುವ ಬಡತನ, ತಿಳಿವಳಿಕೆಯ ಕೊರತೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಯಳಂದೂರು ತಾಲೂಕಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಬಂದಿರುವ ವಲಸೆ ಕಾರ್ಮಿಕರೇ ಸಾಕ್ಷಿ.
ಯಳಂದೂರಿನ ಗ್ರಾಮವೊಂದರಲ್ಲಿ 18 ಜನ ವಲಸೆ ಕಾರ್ಮಿಕರು ಕಬ್ಬು ಕಟಾವು ಕೆಲಸ ಮಾಡುತ್ತಿದ್ಧಾರೆ. ಇವರೊಂದಿಗೆ 10-12
ಮಕ್ಕಳು ಬಂದಿದ್ದಾರೆ. ಈ ಕುರಿತು ವಲಸೆ ಕಾರ್ಮಿಕರ ಮೇಸಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ನಮ್ಮೂರಿನಲ್ಲಿ ಮಳೆ, ಬೆಳೆ ಇಲ್ಲದೆ, ಕೂಲಿ ಕೆಲಸವೂ ಸಿಗದೆ ಈ ಕಡೆಗೆ ವಲಸೆ ಬರುತ್ತೇವೆ. ಊರಿನಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲ, ತಿಳಿದಿರುವ ಮಕ್ಕಳೆಲ್ಲಾ ವಸತಿ ಶಾಲೆಗಳಿಗೆ ಸೇರಿದ್ದಾರೆ. ಇದ್ಯಾವುದೂ ಇಲ್ಲದವರು ತಮ್ಮೊಂದಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ನಮ್ಮೊಂದಿಗೆ ಬಂದಿರುವ ಮಕ್ಕಳನ್ನು ಕೂಲಿ ಸಮಯದಲ್ಲಿ ಜಮೀನಿನ ಬಳಿ ಕೂರಿಸಿರುತ್ತೇವೆ. ಕಬ್ಬು ಕತ್ತರಿಸುವ ಕೆಲಸ ಮುಗಿದ ಮೇಲೆ ಪಾಲಕರು ಕರೆದುಕೊಂಡು ಬರುತ್ತಾರೆ. ನಾವು ವರ್ಷದಲ್ಲಿ 9 ತಿಂಗಳು ಕೂಲಿಗಾಗಿ ವಲಸೆ ಬರುತ್ತೇವೆ ಎಂದು ಹೇಳಿದರು.
ಇವರಿಗೆ ಒಟ್ಟು 7 ಮಕ್ಕಳಂತೆ. ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಓದಿಸುತ್ತಿದ್ದೇನೆ ಎನ್ನುವ ಮೇಸಿ 3ನೇ ತರಗತಿಗೆ ಸೇರಬೇಕಿದ್ದ ತನ್ನ ಕಿರಿಯ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದಾರೆ. ಹತ್ತಿರದ ಶಾಲೆಗೆ ಕಳುಹಿಸಲು ಪ್ರಯತ್ನಿಸಿದರೆ ಮಕ್ಕಳು ಅಳುತ್ತವೆ, ತರಗತಿಯಲ್ಲಿ ಗಲೀಜು ಮಾಡುತ್ತವೆ ಎನ್ನುತ್ತಾರೆ.
ವಲಸೆ ಕಾರ್ಮಿಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿಯೇ ಇಲ್ಲ. ಇವರಿಗೆ ಶಿಕ್ಷಣಕ್ಕಿಂತ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಮುಖ್ಯ. ಹೀಗಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣ ಪಡೆಯುವುದರಲ್ಲಿ ವಿಲವಾಗುತ್ತಿವೆ. ಭವಿಷ್ಯದಲ್ಲಿ ತಮ್ಮ ಪಾಲಕರಂತೆ ಕಬ್ಬು ಕಟಾವು ಮಾಡುವ ವಲಸೆ ಕಾರ್ಮಿಕರಾಗಿ ರೂಪುಗೊಳ್ಳಲು ಸಜ್ಜಾಗುತ್ತಿವೆ.
ಅಪಾಯದಲ್ಲಿರುವ ಮಕ್ಕಳು: ವಲಸೆ ಕಾರ್ಮಿಕರು ಕಬ್ಬು ಕತ್ತರಿಸಲು ಜಮೀನುಗಳಿಗೆ ಹೋದಾಗ ಮಕ್ಕಳು ಅಪಾಯದಲ್ಲಿ ಸಿಲುಕುತ್ತಿದ್ದಾರೆ. ಯಳಂದೂರು ತಾಲೂಕಿನ ಗ್ರಾಮವೊಂದರ ಕೆರೆಯ ದಡದಲ್ಲಿ ವಲಸೆ ಕಾರ್ಮಿಕರು ಬಿಡಾರ ಹೂಡಿದ್ದಾರೆ. ನಿರಂತರ ಮಳೆಗೆ ಶೀತ ಭೂಮಿ ಕೆಸರಾಗಿದೆ. ಕೆಸರಿನಲ್ಲಿ ಕಾಲಿಡುವುದಕ್ಕೂ ಯೋಚನೆ ಮಾಡುವಂತ ಪ್ರದೇಶದಲ್ಲಿ ಇವರು ವಾಸ ಮಾಡುತ್ತಿದ್ದಾರೆ. ಇವರ ಮಕ್ಕಳು ಬಿಡಾರದ ಬಳಿ ಆಟವಾಡುತ್ತಾ ಶಿಕ್ಷಣದಿಂದ ವಂಚಿತರಾಗಿ ಕಾಲ ಕಳೆಯುತ್ತಿದ್ದಾರೆ.
ಬಿಡಾರದ ಎದುರು ಇರುವ ಕೆರೆಯಲ್ಲಿ ನೀರಿಲ್ಲ. ಆದರೆ ದೊಡ್ಡ ಹಳ್ಳವಿದೆ. ಇದರೊಳಗೆ ಮಕ್ಕಳು ಉರುಳಿ ಬಿದ್ದರೆ ಪೆಟ್ಟಾಗುತ್ತದೆ. ವಲಸೆ ಕಾರ್ಮಿಕರು ಕಬ್ಬು ಕತ್ತರಿಸುವಾಗ ಮಕ್ಕಳು ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಲವತ್ತ ಮಾರ್ಗದ ರಸ್ತೆಯ ಬೆಟ್ಟ-ಗುಡ್ಡಗಳ ಬಳಿಯ ನಿರ್ಜನ ಪ್ರದೇಶದಲ್ಲಿ ಇಬ್ಬರು ಮಕ್ಕಳು ಕಾಣಸಿಕ್ಕಿದ್ದರು. ಈ ಪ್ರದೇಶವು ಕಾಡಿನಿಂದ ಸುತ್ತುವರಿದಿದೆ. ವನ್ಯಪ್ರಾಣಿಗಳ ದಾಳಿ ನಡೆದರೆ ವಲಸೆ ಕಾರ್ಮಿಕರ ಮಕ್ಕಳು ಬಲಿಯಾಗಿಬಿಡುತ್ತಾರೆ.
20 ಮಕ್ಕಳು ಪತ್ತೆ:
ಕಳೆದ ವರ್ಷ ಕಬ್ಬು ಕಟಾವು ಮಾಡಲು ಬಂದಿದ್ದ ವಲಸೆ ಕಾರ್ಮಿಕರ 20 ಮಕ್ಕಳನ್ನು ಗುರುತಿಸಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕಳೆದ ವರ್ಷ ಬೀದಿ ಬದಿ ವಾಸ ಮಾಡುವ ಒಟ್ಟು 38 ಮಕ್ಕಳನ್ನು ಪತ್ತೆ ಮಾಡಿತ್ತು. ಇವುಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದ ಕುಟುಂಬಗಳೊಂದಿಗೆ 20 ಮಕ್ಕಳು ಇದ್ದರು. ಅವರನ್ನು ಹತ್ತಿರದ ಶಾಲೆ, ಅಂಗನವಾಡಿಗೆ ತಾತ್ಕಾಲಿಕವಾಗಿ ತೆರಳಲು ವ್ಯವಸ್ಥೆ ಮಾಡಿದ್ದರು. ಈ ಕಾರ್ಯ ಪ್ರಸ್ತುತ ವರ್ಷವೂ ಮುಂದುವರಿದು ಮಕ್ಕಳಿಗೆ ಶಿಕ್ಷಣ ದೊರೆಯಬೇಕಿದೆ.
ಮಕ್ಕಳ ಶಿಕ್ಷಣ ಕಾರ್ಖಾನೆ ಜವಾಬ್ದಾರಿ ಕಬ್ಬು ಕಟಾವು ಮಾಡಿಸಲು ವಲಸೆ ಕಾರ್ಮಿಕರನ್ನು ಕೂಲಿಗೆ ಕರೆಸುವ ಕಾರ್ಖಾನೆಗೆ ಮಕ್ಕಳ ಶಿಕ್ಷಣದ ಮೇಲೆ ಜವಾಬ್ದಾರಿ ಇದೆ. ಈ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಸವಿತಾ ವಿಜಯವಾಣಿಯೊಂದಿಗೆ ಮಾತನಾಡಿ, ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ವಿಚಾರವಾಗಿ ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಮಾಡಿಕೊಂಡು ಹೋಗಿದ್ದೆವು. ಕಬ್ಬು ಕಟಾವು ಮಾಡುವ ಕಾರ್ಮಿಕರನ್ನು ಕಾರ್ಖಾನೆಯವರೇ ಕರೆಸಿಕೊಳ್ಳುವುದರಿಂದ ಅವರ ಮಕ್ಕಳಿಗೆ ತಾತ್ಕಾಲಿಕವಾಗಿ ಶಿಕ್ಷಣ ಕೊಡಿಸಲು ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೆವು. ಈ ವರ್ಷ ಕಬ್ಬು ಕಟಾವು ಮಾಡಲು ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ತಾತ್ಕಾಲಿಕವಾಗಿ ಶಿಕ್ಷಣ ಕೊಡಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ. ಕುಂತೂರು ಸಕ್ಕರೆ ಕಾರ್ಖಾನೆಯ ಅಧಿಕಾರಿ ಮಹದೇವಪ್ಪ ಮಾತನಾಡಿ, ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ವಿಚಾರವಾಗಿ ಕಳೆದ ವರ್ಷ ಕಾರ್ಖಾನೆಗೆ ಕಾರ್ಮಿಕ ಇಲಾಖೆ ನಿರ್ದೇಶನಗಳನ್ನು ನೀಡಿತ್ತು. ಅದರಂತೆ ಕ್ರಮವಹಿಸಿದ್ದೆವು. ಈ ಸಲ ಜಿಲ್ಲೆಯಲ್ಲಿ ಕಬ್ಬು ಕಟಾವು ಮಾಡುತ್ತಿರುವ ವಲಸೆ ಕಾರ್ಮಿಕರ ಮಕ್ಕಳನ್ನು ಹತ್ತಿರದ ಅಂಗನವಾಡಿ, ಶಾಲೆಗೆ ತಾತ್ಕಾಲಿಕವಾಗಿ ಸೇರಿಸುತ್ತೇವೆ ಎಂದಿದ್ದಾರೆ.
ವಲಸೆ ಕಾರ್ಮಿಕರ ಮಕ್ಕಳನ್ನು ಗುರುತಿಸಿ ತಾತ್ಕಾಲಿಕವಾಗಿ ಶಿಕ್ಷಣ ಕೊಡಿಸಲು ಚೈಲ್ಡ್ ಹೆಲ್ಪ್ ಲೈನ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಅವರು ಇರುವಷ್ಟು ದಿನ ಅಕ್ಕಪಕ್ಕದ ಅಂಗನವಾಡಿ, ಶಾಲೆಗೆ ಸೇರಿಸಲು ತಿಳಿಸಿದ್ದೇವೆ. ಚಾಮರಾಜನಗರದ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ನಾನೇ ನೋಡಿ ಶಾಲೆಗೆ ಸೇರಿಸಲು ತಿಳಿಸಿದ್ದೆ. ಪ್ರಸ್ತುತ ಕಬ್ಬು ಕಟಾವಿಗೆ ಬಂದಿರುವ ಕಾರ್ಮಿಕರ ಮಕ್ಕಳಿಗೂ ಇಲ್ಲಿರುವವರೆಗೂ ಶಿಕ್ಷಣ ಕೊಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಮಂಜುನಾಥ್, ಉಪ ನಿರ್ದೇಶಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾಮರಾಜನಗರ