ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಯೂ ಬೇಕು, ಅಪರ ಜಿಲ್ಲಾಧಿಕಾರಿ ಅಭಿಮತ, ಜಿಲ್ಲಾಡಳಿತ ಭವನದಲ್ಲಿ ಯುವಜನೋತ್ಸವ

Yuvajanotsava 26.11 (6)
Published on

ಬೆಂಗಳೂರು ಗ್ರಾಮಾಂತರ: ಸೃಜನಾತ್ಮಕ ವ್ಯಕ್ತಿಯಾಗಿ ರೂಪುಗೊಳ್ಳಲು ಕಲೆ ಸಹಕಾರಿಯಾಗಿದ್ದು, ಯುವಜನತೆ ವಿದ್ಯಾಭ್ಯಾಸದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲೆಯ ಅನಾವರಣಕ್ಕೆ ಸಾಕ್ಷಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೆಂಗಳೂರು ಗ್ರಾಮಾಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿ ಶನಿವಾರ 2021-22ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ, ಜಲಸಂರಕ್ಷಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಲೆಗೆ ಯಾವುದೇ ಗಡಿರೇಖೆ ಇಲ್ಲ. ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಆಯ್ಕೆ ಮಾಡಿಕ್ಕೊಳ್ಳುವುದು ಕೆಲವರನ್ನು ಮಾತ್ರ. ಕಲಾವಿದರಾಗಿ ರೂಪುಗೊಳ್ಳುವ ಹಾದಿ ಹೆಚ್ಚು ಕಠಿಣ. ಈ ನಿಟ್ಟಿನಲ್ಲಿ ಆಸಕ್ತಿವಹಿಸಿ ನಿರಂತರ ಅಭ್ಯಾಸದಿಂದ ಕಲೆ ಒಲಿಯುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ವಿದೇಶಿ ನೃತ್ಯ ಪ್ರಕಾರಗಳಲ್ಲಿ ಯುವಜನರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ದೇಶೀಯ ಕಲೆಗಳಿಗೂ ಆದ್ಯತೆ ನೀಡಿ, ವೇದಿಕೆಯನ್ನು ಬಳಸಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಭರತನಾಟ್ಯ, ಯಕ್ಷಗಾನ, ಕುಚುಪುಡಿ, ಕಥಕ್, ಶಾಸೀಯ ನೃತ್ಯ ಶೈಲಿಗೆ ಅದರದ್ದೇ ಆದ ಕ್ರಮಬದ್ಧ ಅಧ್ಯಯನ ಹಾಗೂ ಪರಂಪರೆ ಇದೆ. ಯುವ ಜನರು ಕಲೆಯಲ್ಲಿ ತೊಡಗಿಸಿಕೊಂಡರೆ ಸಂಗಾತಿಯಂತೆ ಜತೆಗಿರುತ್ತದೆ ಎಂದು ತಿಳಿಸಿದರು.

ಸಮಾನತೆ ಭಾತೃತ್ವ ಸಾರ: ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನವೆಂದರೆ ಅದು ಭಾರತ ಸಂವಿಧಾನ ಎಂದರೆ ತಪ್ಪಾಗಲಾರದು. ನಮ್ಮ ಸಂವಿಧಾನದಲ್ಲಿರುವ ವಿಷಯಗಳಿಂದಾಗಿ ಎಲ್ಲ ದೇಶಗಳು ಭಾರತದತ್ತ ತಿರುಗಿ ನೋಡುವ ಸಂದರ್ಭ ನಿರ್ಮಾಣವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಕೃಷ್ಣಪ್ಪ ಹೇಳಿದರು. ಸಮಾನತೆ, ಭ್ರಾತೃತ್ವ, ಜಾತ್ಯಾತೀತ ಹಾಗೂ ಮಾನವೀಯ ಮೌಲ್ಯಗಳನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಹಿರಿಮೆಗೆ ಪಾತ್ರವಾಗಿದೆ ಎಂದು ಹೇಳಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯ ನೀಡುವ ಮೂಲಕ ನೆಮ್ಮದಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ, ಇಂತಹ ವೇದಿಕೆ ಕಾರ್ಯಕ್ರಮಗಳು ಯುವಜನರಲ್ಲಿ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ಯುವಜನೋತ್ಸವ ಕಾರ್ಯಕ್ರಮಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net