

ದೇವನಹಳ್ಳಿ: ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ, ಬೆಳೆಯುತ್ತ ಕೆಲವು ಕಟ್ಟುಪಾಡು ಚೌಕಟ್ಟುಗಳಿಂದ ಅಲ್ಪಮಾನವರಾಗುತ್ತಾರೆ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.
ಪಟ್ಟಣದ ಮರಳುಬಾಗಿಲಿನ ಶ್ರೀ ದಿವ್ಯಜ್ಯೋತಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಆವರಣದಲ್ಲಿ ಕರವೇ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕನಕ ಜಯಂತಿಯಲ್ಲಿ ಮಾತನಾಡಿದರು.
ಮಾನವೀಯ ಮೌಲ್ಯಗಳುಳ್ಳ ವಿಶ್ವಮಾನವರಾಗಿ ಬೆಳೆಯಲು ಶಿಕ್ಷಣ ಬಹುಮುಖ್ಯ. ಸುಶಿಕ್ಷಿತ ಶಿಕ್ಷಣದಿಂದ ಬದಲಾವಣೆ ಸಾಧ್ಯ. ಮಾನವಕುಲ ಒಂದೇ ಎಂಬ ಸಂದೇಶ ಸಾರಿದ ದಾಸಶ್ರೇಷ್ಠ ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಬೆಳೆಯುತ್ತ ಬದುಕಿನ ಸತ್ಯ ಅರಿತು ಮಾನವಕುಲದ ಮೇಲು ಕೀಳು ನಾನು ನನ್ನದು ಎಂಬ ತಾರತಮ್ಯ ಹೊಗಲಾಡಿಸಲು ಕೀರ್ತನೆಗಳ ಮೂಲಕ ಸಂದೇಶ ಸಾರಿದ ಸಂತ ಇಂದು ವಿಶ್ವಮಾನವರಾಗಿ ಸದಾ ಸ್ಮರಣೀಯರಾಗಿದ್ದಾರೆ ಎಂದರು.
ಮಾನವೀಯ ಮೌಲ್ಯ ಹೊಂದಿದ್ದ ಪುನೀತ್ ರಾಜ್‌ಕುಮಾರ್ ಅವರ ಜೀವನದಿಂದಲು ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಹಾಗಾಗಿ ಜಯಂತಿಗಳ ಆಚರಣೆಯ ಉದ್ದೇಶವೇ ಮಕ್ಕಳಲ್ಲಿ ಮತ್ತು ಯುವ ಪೀಳಿಗೆಗೆ ಮಹನೀಯರ ಆದರ್ಶ ಪರಿಚಯಿಸಲು ಎಂದರು.
ಕರವೇ ಗೌರವಾಧ್ಯಕ್ಷ ಡಾ.ಎನ್.ಚಂದ್ರಶೇಖರ್ ಮಾತನಾಡಿ, ದಾಸಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದಿ ಭಗವಂತನೇ ತನ್ನ ಕಡೆ ತಿರುಗುವಂತೆ ಮಾಡಿದ್ದ ಮಹಾತ್ಮ ಕನಕದಾಸರು ಎಂದ ಅವರು ಕಸಾಪ ಜಿಲ್ಲಾ ಸಾರಥ್ಯ ವಹಿಸಿಕೊಂಡಿರುವ ಕೃಷ್ಣಪ್ಪ ಅವರ ಕನ್ನಡ ಕಟ್ಟುವ ಕೆಲಸ ಮಾಡಲು ನಮ್ಮ ಬೆಂಬಲವಿದೆ ಎಂದರು.
ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ವಿನೋದಕುಮಾರಗೌಡ ಮಾತನಾಡಿ, ಕನಕದಾಸರು ನಾನು ಎನ್ನುವುದು ನಶ್ವರ. ನಾನು ಎಂಬ ಅಹಂ ಹೋದರೆ ನಾವು ಸಹ ಸ್ವರ್ಗಕ್ಕೆ ಹೋಗಬಹುದು ಎಂದು ಹೇಳಿದ್ದರು. ಅವರ ಮಾತಿನ ಆಶಯದತೆ ನಡೆಯೋಣ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ಮಾತನಾಡಿ, ಕನ್ನಡ ಸೇವೆಯ ರಥ ನಿಲ್ಲದಿರಲಿ. ಈ ಗೆಲುವು ಸಮನ್ವಯ ಸಮಿತಿಗೆ ಸಿಕ್ಕ ಜಯವಾಗಿದೆ ಎಂದರು.
ಜಿಲ್ಲಾ ಕರವೇ ಅಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ, ತಾಲೂಕು ಅಧ್ಯಕ್ಷ ಆರ್.ವೆಂಕಟರಾಜು, ಸಮರ ಸೇನೆ ಅಧ್ಯಕ್ಷ ಗೋಕರೆ ಗೇಟ್ ಮಂಜುನಾಥ್, ಜಿಲ್ಲಾ ಕಲಾವಿಧರ ಸಂಘದ ಅಧ್ಯಕ್ಷ ಕೆಂಪಣ್ಣ, ಕಲಾವಿದ ವಾಸುದೇವ್ ಹೊಸಹಳ್ಳಿ, ಪದಾಧಿಕಾರಿಗಳಾದ ಅಶ್ವತ್ಥಗೌಡ, ನಾಗರಾಜ್, ಬಾಬು, ಹರ್ಷ ಇತರರು ಇದ್ದರು.