

ಎನ್.ಆರ್.ಪುರ: ಎಲ್ಲ ಪಾಲಕರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.
ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಪಠ್ಯೇತರ ಚಟುವಟಿಕೆಯಾಗಿ ಪ್ರತಿಭಾ ಕಾರಂಜಿ, ಕ್ರೀಡಾಕೂಟ ನಡೆಸುತ್ತಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದು ಹೇಳಿದರು.
ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಮುಖ್ಯ ಉದ್ದೇಶ. ಈ ವರ್ಷದ ವಲಯ ಮಟ್ಟದ ಪ್ರತಿಭಾ ಕಾರಂಜಿ ಬಾಳೆಹೊನ್ನೂರಿನಲ್ಲಿ ಪ್ರಾರಂಭವಾಗಿದೆ. 9 ಕ್ಲಸ್ಟರ್ ಹಂತದಲ್ಲಿ ನಡೆದು ನಂತರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ. ಪ್ರತಿಭಾ ಕಾರಂಜಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದ್ದರೂ ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ನಡೆಸುತ್ತಾರೆ ಎಂದರು.
ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಮಾತನಾಡಿ, ನಾಗಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ 2 ಸರ್ಕಾರಿ ಶಾಲೆಗಳು ಮಾತ್ರ ಇವೆ. ಸರ್ಕಾರಿ ಶಾಲೆ ಎಂದು ಪಾಲಕರು ನಿರ್ಲಕ್ಷ್ಯ ಮಾಡದೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು. ದಿಂಡಿನಕೊಪ್ಪ ಶಾಲೆಗೆ ದಾಸೋಹ ಭವನ ನಿರ್ಮಸಲಾಗುತ್ತಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಹೇಳಿದರು.
10 ಶಾಲೆಗಳಿಂದ ಬಂದ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕಿ ರೂಪಾ, ದಾನಿಗಳಾದ ಪುರುಷೋತ್ತಮ್ ಭಟ್, ವಿಲ್ಸನ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಉಪಾಧ್ಯಕ್ಷೆ ಆಶಾ, ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ನಂಜುಂಡಪ್ಪ, ಅಶೋಕ್, ದೇವರಾಜ್, ರಂಗಪ್ಪ, ಸಂಗೀತಾ, ಕೃಷ್ಣ್ಣಮೂರ್ತಿ, ಪ್ರೇಂಕುಮಾರ್, ಅರುಣಕುಮಾರಿ, ಆರ್.ನಾಗರಾಜ್, ತಿಮ್ಮೇಶ್ ಇತರರಿದ್ದರು.