

ಎನ್.ಆರ್.ಪುರ: ದಲಿತರು ಮುಖ್ಯವಾಹಿನಿಗೆ ಬರಲು ಪ್ರೊ. ಕೃಷ್ಣಪ್ಪ ಕಾರಣ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಲ್.ಎಸ್.ಶ್ರೀಕಾಂತ್ ತಿಳಿಸಿದರು.
ಗುರುವಾರ ಸೂಸಲವಾನಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರತಿ ಹೋಬಳಿಯಲ್ಲೂ ವಸತಿ ಶಾಲೆ ತೆರೆಯಲು ಪ್ರೊ. ಕೃಷ್ಣಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ರಾಜ್ಯಾದ್ಯಂತ ಪ್ರೊ. ಕೃಷ್ಣಪ್ಪ ಬಣದ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದರೂ ಒಗ್ಗಟ್ಟಿನ ಕೊರತೆಯಿಂದ ನಮ್ಮ ಶಕ್ತಿ ಕಡಿಮೆಯಾಗಿದೆ. ಸಂವಿಧಾನಬದ್ಧವಾಗಿ ಹೋರಾಟ ಮಾಡಲು ಸಂಘಟನೆ ಸಿದ್ಧವಿದೆ. ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಕೃಷ್ಣಪ್ಪ ಬಣದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಗಟ್ಟಿ ಮಾಡುತ್ತಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಡಾ. ಅಂಬೇಡ್ಕರ್ ಅವರು ದಲಿತರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಂವಿಧಾನದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉನ್ನತ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮುಂದೆ ಅವರೇ ಸಮಾಜದ ಆಸ್ತಿಯಾಗುತ್ತಾರೆ ಎಂದರು.
ಸಿಪಿಐ ಗುರುದತ್ ಕಾಮತ್ ಮಾತನಾಡಿ, ಡಿಎಸ್‌ಎಸ್ ಕಾನೂನುಬದ್ಧ ಹೋರಾಟಕ್ಕೆ ಸಹಕಾರ ನೀಡುತ್ತೇವೆ. ದೀನ, ದಲಿತರ ಸಮಸ್ಯೆಗೆ ಸಂಘಟನೆ ಸ್ಪಂದಿಸಬೇಕು ಎಂದು ಹೇಳಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ಮಾತನಾಡಿ, ಸೂಸಲವಾನಿ ಗ್ರಾಮದಲ್ಲಿ ಈ ಹಿಂದೆ ಹಲವಾರು ವರ್ಷಗಳಿಂದಲೂ ಆದಿ ಕರ್ನಾಟಕ ಹರಿಜನ ಜನಾಂಗದ 40 ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರು. ಈಗ ನಿಲ್ಲಿಸಲಾಗಿದೆ. ಇದರಿಂದ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಅವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಕೇರಳದಿಂದ ವಲಸೆ ಬಂದು ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. 40 ಕುಟುಂಬದವರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಡಿಎಸ್‌ಎಸ್ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದರು.
ಡಿಎಸ್‌ಎಸ್ ಜಿಲ್ಲಾ ಮಹಿಳಾ ಒಕ್ಕೂಟದ ಸಮಿತಿ ಸದಸ್ಯೆ ಪವಿತ್ರಾ ದೇವರಾಜ್, ಕಡಹಿನನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯೆ ಲಿಲ್ಲಿ ಮಾತುಕುಟ್ಟಿ, ಮುಖಂಡರಾದ ಎಸ್.ಡಿ.ರಾಜೇಂದ್ರ, ಎನ್.ಎಂ.ಕಾಂತರಾಜ್, ಮಂಜುನಾಥ್ ಕೆಸವಿ, ಮುಖಂಡರಾದ ಮಹೇಂದ್ರಸ್ವಾಮಿ, ವಾಲ್ಮೀಕಿ ಶ್ರೀನಿವಾಸ್, ವಿಮಲಾ, ಶೆಟ್ಟಿಕೊಪ್ಪ ಮಹೇಶ್, ಪಿಕಪ್ ಚಂದ್ರು, ಮಹೇಂದ್ರಸ್ವಾಮಿ, ವಿಜಯಕುಮಾರಿ, ಕಡೂರು ಲಕ್ಷ್ಮಣ ಇತರರಿದ್ದರು.