ಶಿಕ್ಷಣದಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ

IMG-20230614-WA0122
ಚನ್ನರಾಯಪಟ್ಟಣದ ಗೂರಮರನಹಳ್ಳಿ ಪ್ರೌಢಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ರಶ್ಮಿ ಉದ್ಘಾಟಿಸಿದರು. ಕೆ.ಆರ್.ವಿಶ್ವನಾಥ್, ರಾಜೇಶ್ವರಿ, ಕೆ.ವಿ.ರಮೇಶ್, ಇತರರು ಇದ್ದರು.
Published on

ಚನ್ನರಾಯಪಟ್ಟಣ: ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಭವಿಷ್ಯ ಉಜ್ವಲವಾಗಲು 14 ವರ್ಷದ ಒಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು ಎಂದು ಜೆಎಂಎಫ್‌ಸಿ ಅಧಿಕ ಸಿವಿಲ್ ನ್ಯಾಯಾಧೀಶರಾದ ರಶ್ಮಿ ತಿಳಿಸಿದರು.
ಪಟ್ಟಣದ ಗೂರಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧ ದಿನದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಗೂರಮರನಹಳ್ಳಿ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿದ್ದಲ್ಲಿ ಬಾಲ ಕಾರ್ಮಿಕರಾಗುವುದು ತಪ್ಪುತ್ತದೆ. ಪಾಲಕರಿಗೆ ಬಡತನವಿದ್ದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆದು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಎಲ್ಲರೂ ಕೈ ಜೋಡಿಸಿ ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದುಹಾಕಲು ಪಣ ತೊಡೋಣ. ಬಾಲಕಾರ್ಮಿಕ ಪದ್ಧತಿ ಒಂದು ಅಪರಾಧ ಎಂಬುದರ ಅರಿವು ಜನರಿಗಿಲ್ಲ. ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯಾವಸ್ಥೆಯನ್ನು ಕಸಿದುಕೊಳ್ಳುವಂತಹದ್ದು, ಬಾಲ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ತರುವ ಕಾರ್ಯವಾಗಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ಆರ್. ವಿಶ್ವನಾಥ್ ಮಾತನಾಡಿ, ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ ದೇಶದ ಉತ್ತಮ ನಾಗರಿಕರಾರಬೇಕು ಎಂಬುದು ಈ ದಿನದ ಉದ್ದೇಶವಾಗಿದೆ. ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ. ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ಮೊದಲ ಅಪರಾಧಕ್ಕೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರೂ.ಗಳಿಂದ 50,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ ನಿರೀಕ್ಷಕ ಪುರುಷೋತ್ತಮ್ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ರಾಜೇಶ್ವರಿ, ಕನ್ನಡ ಶಿಕ್ಷಕ ಕೆ.ವಿ.ರಮೇಶ್, ಕಾನೂನು ಇಲಾಖೆಯ ಸಿಬ್ಬಂದಿ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net