ಶಿಕ್ಷಣದಿಂದ ಬಡತನ ನಿರ್ಮೂಲನೆ, ಸಚಿವ ಎಂಟಿಬಿ ನಾಗರಾಜ್ ಅಭಿಮತ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

26-Manjunath-HSK-01
Published on

ಹೊಸಕೋಟೆ: ಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಅಕ್ಷರ ಲೇಸು ಎಂಬ ಮಾತಿನಂತೆ ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾದರೆ ಬಡತನ ನಿರ್ಮೂಲನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ಕನಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಕುರುಬರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಸುಮಾರು 300 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದಿಂದ ತಲಾ 2500 ರೂ. ಆರ್ಥಿಕ ಸಹಾಯಧನ ಹಾಗೂ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ತಲಾ 5000 ರೂ. ಸಹಾಯ ಧನ ನೀಡಿ, ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಉನ್ನತ ವಿದ್ಯಾಭ್ಯಾಸ ಮಾಡಲಿಚ್ಚಿಸುವ ಬಡ ವಿದ್ಯಾರ್ಥಿಗಳು ನೇರವಾಗಿ ನಮ್ಮನ್ನು ಭೇಟಿ ಮಾಡಿದರೆ ಅವರಿಗೆ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಗಿನೆಲೆ ಪೀಠದ ನಂದಗುಡಿ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಶೈಕ್ಷಣಿಕ ಸಾಧನೆಯಿಂದ ಮಾತ್ರ ಬಡತನದಿಂದ ಹೊರಬರಲು ಸಾಧ್ಯ ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್ ಮಾತನಾಡಿ, ಸಮಾಜ ನಮಗೇನು ನೀಡಿತು ಎಂಬುದರ ಬದಲಿಗೆ ಸಮುದಾಯಕ್ಕೆ ನನ್ನ ಕೊಡುಗೆ ಏನು ಎಂಬುದರ ಬಗ್ಗೆ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಸಮಾಜದಿಂದ ಸಹಕಾರ ಪಡೆದು ಉನ್ನತ ಸ್ಥಾನಕ್ಕೇರಿದ ಮೇಲೆ ಸಮುದಾಯದ ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕು. ತಾಲೂಕಿನಲ್ಲಿ ಸಮುದಾಯ ಒಗ್ಗಟ್ಟಾಗಿರುವ ಕಾರಣ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ಮುಂದೆಯೂ ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

300 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಪತ್ನಿ ಶಾಂತಕುಮಾರಿ, ಪುತ್ರ ಎಂಟಿಬಿ ನಿತಿನ್ ಪುರುಷೋತ್ತಮ್ ಆರ್ಥಿಕ ಸಹಾಯಧನ, ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದರು.

ತಾಲೂಕು ಕುರುಬರ ಸಂಘದ ಖಜಾಂಚಿ ಎಂ.ಆರ್. ರಾಜಣ್ಣ, ಸಹಕಾರ್ಯದರ್ಶಿ ಕೆಂಪಣ್ಣ, ನಿರ್ದೇಶಕರಾದ ಚೌಡಪ್ಪ, ಸಿ. ನಾಗರಾಜ್, ಹುಲ್ಲೂರಪ್ಪ, ರಾಜಾಂಜಿನಿ, ಪಿ. ನಾರಾಯಣ್, ರಾಜೇಂದ್ರ, ದಶರಥ್, ಎಸ್.ಬಿ. ಮುನಿರಾಜು, ವಿ.ಶ್ರೀನಿವಾಸ್, ಎಸ್.ಪಿ. ರಾಮು, ಟಿ. ನಾಗರಾಜ್, ನಗರಸಭಾ ಸದಸ್ಯರಾದ ದೇವರಾಜ್, ಬಸವರಾಜ್, ಮುಖಂಡ ವೆಂಕಟಸ್ವಾಮಿ ಹಾಜರಿದ್ದರು.

ಹೊಸಕೋಟೆ ತಾಲೂಕು ಕುರುಬರ ಸಂಘದಿಂದ ಸಮುದಾಯದ ಶಾಲೆ ತೆರೆಯಲು ಚರ್ಚಿಸಲಾಗಿದೆ. 4 ಎಕರೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಆದಷ್ಟು ಬೇಗ ನಿವೇಶನದ ಜತೆಗೆ ಅನುದಾನವನ್ನೂ ಬಿಡುಗಡೆ ಮಾಡಿಸಲಾಗುವುದು.

ಎಂಟಿಬಿ ನಾಗರಾಜ್

ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net