

ಚಿತ್ರದುರ್ಗ: ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯವಿದ್ದು, ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.
ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ (ಮೀಸಲಾತಿ) ಸಮಿತಿಯಿಂದ ಬಿಎನ್‌ಎಸ್, ಬಿಎನ್‌ಎಸ್‌ಎಸ್, ಬಿಎನ್‌ಎಸ್‌ಎ ಹಾಗೂ ಪಿಒಎ ಕಾಯ್ದೆಗಳ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪಡೆದಂತೆ ಹಕ್ಕು ಪಡೆಯಲು ಹೋರಾಟ ನಡೆದಿವೆ. ಹೀಗಾಗಿ ಅಂಬೇಡ್ಕರ್ ಅವರು ಸೂಚಿಸಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರಕ್ಕೂ ಹೆಚ್ಚು ಆದ್ಯತೆ ನೀಡಬೇಕಿದೆ ಎಂದರು.
ಅಂಬೇಡ್ಕರ್ ವಿಶ್ವ ಪರ್ಯಟನೆ ಮಾಡಿದ್ದರಿಂದಾಗಿ ದೇಶಕ್ಕೆ ಅರ್ಥ ಗರ್ಭೀತ, ವಿಶಿಷ್ಟ, ಉತ್ತಮ ಸಂವಿಧಾನ ನೀಡಿದ್ದಾರೆ. ಅವರ ಸಮ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ದೇಶದ ಕಾನೂನು ಪ್ರಜೆಗಳನ್ನು ರಕ್ಷಿಸುತ್ತಿದ್ದು, ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬಡತನ, ಅಸ್ಪಶ್ಯತೆ, ಮೌಢ್ಯ ಈ ಮೂರು ಸಮಾಜಕ್ಕೆ ಶಾಪವಾಗಿದ್ದು, ಅವುಗಳ ನಿರ್ಮೂಲನೆ ಅಗತ್ಯ. ಜಾತಿ, ಹಣದಿಂದ ಯಾರೂ ದೊಡ್ಡವರಲ್ಲ. ಉನ್ನತ ಸ್ಥಾನಕ್ಕೇರಲು ಸಾಧಕರಾಗಲು ಮುಂದಾಗಬೇಕು. ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಇತರರನ್ನು ಜೊತೆಯಲ್ಲಿ ಕೊಂಡೊಯ್ಯುವ ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಜಮೀನು ಮಾರಾಟಕ್ಕೆ ಮುಂದಾಗಿ ಕಳೆದುಕೊಳ್ಳದೆ, ಭೂಮಿ ತಾಯಿಯನ್ನು ನಂಬಿ ಸಮಗ್ರ ಕೃಷಿಯತ್ತ ಒಲವು ತೋರಿ ಎಂದು ಕಿವಿಮಾತು ಹೇಳಿದರು.
ಹೈಕೋರ್ಟ್ ವಕೀಲ ಬಾಲನ್ ಮಾತನಾಡಿ, ಸರ್ಕಾರ ಈಗಷ್ಟೇ ಜಾರಿಗೊಳಿಸಿರುವ ಹೊಸ ಕಾಯ್ದೆ, ಕಾನೂನುಗಳು ಹಳೆಯದಾದ ಬಾಟಲ್‌ನಲ್ಲಿ ಹೊಸ ವಿಷದಂತಿದೆ. ಅದು ಇನ್ನೂ ಅನೇಕರಿಗೆ ಅರ್ಥವಾಗುತ್ತಿಲ್ಲ. ಕಡಿಮೆ ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರ ಪರವಿದ್ದು, ದಲಿತ ವಿರೋಧಿಯಾಗಿದೆ ಎಂದು ದೂರಿದರು.
ಕಾನೂನು ತಿದ್ದುಪಡಿ, ಹೊಸ ಕಾಯ್ದೆ ಜಾರಿ ವೇಳೆ ಶೋಷಿತ, ಹಿಂದುಳಿದ ಸಮುದಾಯದವರಿದ್ದರೆ ದಲಿತರ ಪರವಾದ ಕಾನೂನು ರಚನೆಯಾಗುತ್ತದೆ. ಆದರೆ, ಅಲ್ಲಿ ನಮ್ಮವರ‌್ಯಾರೂ ಇಲ್ಲದಿರುವ ಕಾರಣದಿಂದಾಗಿ ಸಮುದಾಯಕ್ಕೆ ಪೂರಕವಾದ ಕಾನೂನು ಜಾರಿಯಾಗುತ್ತಿಲ್ಲ ಎಂದು ಬೇಸರಿಸಿದರು.
ರಾಜ್ಯ ಸಮಿತಿ ಅಧ್ಯಕ್ಷ ವೈ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಟಿ.ರವಿ, ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ, ಗೌರವಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಜಗದೀಶ್ ಪಿ ಕವಾಡಿಗರಹಟ್ಟಿ, ಕಾರ್ಯದರ್ಶಿ ಎಂ.ಅಂಜಿನಪ್ಪ, ವಕೀಲರಾದ ಎಂ.ಕೆ.ಲೋಕೇಶ್, ಎನ್.ಚಂದ್ರಪ್ಪ, ಮಾಲತೇಶ್ ಅರಸ್, ಜೈ ಭೀಮ್ ಯುವಕ ಸಂಘದ ಅಧ್ಯಕ್ಷ ಎಂ.ಮಹೇಶ್ ಇತರರಿದ್ದರು.