ಶಿಕ್ಷಣದಿಂದ ದೇಶದ ಅಭಿವೃದ್ಧಿ

14 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವು ಮಕ್ಕಳ ಭವಿಷ್ಯದ ಲಕ್ಷಣ. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಸುರೇಶ ಕುಲಕರ್ಣಿ ಹೇಳಿದರು.
ನಗರದ ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಭವ್ಯ ಸಂಸ್ಕೃತಿ ಗಟ್ಟಿಗೊಳಿಸಿ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವ ಜವಾಬ್ದಾರಿ ಕೆಲಸವನ್ನು ಕ್ಲಾಸಿಕ ಶಾಲೆ ಮಾಡುತ್ತಿರುವುದು ಶ್ಲಾಘನೀಯ. ಗುರುವಿನಲ್ಲಿ ಅಚಲ ನಂಬಿಕೆ, ದೃಢ ಭಕ್ತಿ ಮತ್ತು ಸತತ ಪ್ರಯತ್ನದಿಂದ ಜೀವನದ ಗುರಿ ಮುಟ್ಟಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಶಿಕ್ಷಣ ಯಾವುದೇ ವ್ಯಕ್ತಿಯನ್ನು ಸುಭದ್ರ, ಸುಸಂಸ್ಕೃತ ಮತ್ತು ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿಸುತ್ತದೆ. ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿ ಆದಾಗಲೇ ಅರ್ಥಪೂರ್ಣವಾಗುತ್ತದೆ. ಇಲ್ಲಿ ಪಡೆದ ಶಿಕ್ಷಣ ಮುಂದಿನ ಶಿಕ್ಷಣಕ್ಕೆ ಒಳ್ಳೆ ಭವಿಷ್ಯವಾಗಲಿ ಎಂದರು.
ಗಿರೀಶ ತೆಗ್ಗಿನಮಠ, ವಿದ್ಯಾರ್ಥಿಗಳು ಇತರರು ಇದ್ದರು. ಪ್ರಾಚಾರ್ಯ ಮನೋಹರ ಕೆಂಚರಾಹುತ್ ಸ್ವಾಗತಿಸಿದರು. ಶ್ಯಾಮಲಾ ಮತ್ತು ಅಶ್ವಿನಿ ಘಾಟಗೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net