

ಚಾಮರಾಜನಗರ: ಶಿಕ್ಷಣದಿಂದ ಜ್ಞಾನದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಉಪನಿರ್ದೇಶಕ ಎಸ್.ಸ್ವಾಮಿ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಬಿ.ಎಡ್ ಹಿರಿಯ ವಿದ್ಯಾರ್ಥಿಗಳ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕತ್ತಲಿಂದ ಬೆಳಕು ಚೆಲ್ಲಲು ಶಿಕ್ಷಣದಿಂದ ಮಾತ್ರ ಸಾಧ್ಯ. ವಿಶ್ವದ ಯಾವುದೇ ಭಾಗದಲ್ಲೂ ಜೀವಿಸಲು ಹಾಗೂ ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.
ಹರವೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಎಂ.ಆರ್.ಸವಿತಾ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಬಿಡಿವಿನ ಸಮಯದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ದೇಶದ ಮಹಾನ್ ನಾಯಕರ ಗ್ರಂಥಗಳನ್ನು ಓದುವ ಅಭಿರುಚಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿನಿ ಶಿಲ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಬಿ.ಎಡ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ.ಬಸವಣ್ಣ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಶ್ರೀಮುರುಘರಾಜೇಂದ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಮಹಾದೇವಸ್ವಾಮಿ, ಬಿ.ಎಡ್ ಕಾಲೇಜಿನ ಉಪನ್ಯಾಸಕ ಕೆ.ಎಂ.ಯೋಗೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ನಾಗರಾಜು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.