ಶಿಕ್ಷಣದಿಂದ ಉತ್ತಮ ಬದುಕು : ಮೈಸೂರಿನ ನಿರಂತರ ಗೆಳೆಯರ ಬಳಗದ ಸದಸ್ಯ ವೆಂಕಟೇಶ್ ಅಭಿಮತ

05 HANUR 1
Published on

ಚಾಮರಾಜನಗರ : ಬುಡಕಟ್ಟು ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಮೈಸೂರಿನ ನಿರಂತರ ಗೆಳೆಯರ ಬಳಗದ ಸದಸ್ಯ ವೆಂಕಟೇಶ್ ತಿಳಿಸಿದರು.

ಹನೂರು ಪಟ್ಟಣದ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘದ (ಲ್ಯಾಂಪ್ಸ್) ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬುಡಕಟ್ಟು ಮಕ್ಕಳ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಹನೂರು ಭಾಗದಲ್ಲಿ ಸೋಲಿಗ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆದರೆ ಕೆಲ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದರಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಸರಿಯಲ್ಲ. ಒಂದು ಸಮುದಾಯದ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.


ದೇವ ಸೋಲಿಗ ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕ ಮುತ್ತಯ್ಯ ಮಾತನಾಡಿ, ಗಿರಿಜನ ಮಕ್ಕಳು ನೈಸರ್ಗಿಕವಾಗಿ ಶಿಕ್ಷಣದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ಶಾಲೆಯಲ್ಲಿ ಜ್ಞಾನ ಪಡೆದುಕೊಳ್ಳುವುದರಿಂದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಆದ್ದರಿಂದ ಪಾಲಕರು ಮಕ್ಕಳಿಗೆ ಶಿಕ್ಷಣದ ಧನಾತ್ಮಕ ಭಾವನೆಯನ್ನು ಬೆಳೆಸುವುದರ ಜತೆಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ, ರೈಸ್ ಫೌಂಡೇಷನ್ ಮುಖ್ಯಸ್ಥ ಡಾ.ಅಚ್ಚುತರಾವ್, ಆಶ್ರಮ ಶಾಲೆಯ ಶಿಕ್ಷಕಿ ಚಂದ್ರಮ್ಮ, ಸ್ವಯಂ ಸೇವಕರಾದ ಗಿರೀಶ್, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net