ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ : ಅವ್ವೇರಹಳ್ಳಿಯಲ್ಲಿ ಸಂಸದ ಡಿ.ಕೆ. ಸುರೇಶ್ ಅಭಿಮತ

Kailancha-Ph-001-Arogya Mela-Avverahalli-Scool -Udgatane-27-4-2022
Published on

ಕೈಲಾಂಚ: ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಆರೋಗ್ಯ ಮೇಳಗಳಿಂದ ರೈತರಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು.

ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಆರೋಗ್ಯ ಮೇಳದಲ್ಲಿ ಮಾತನಾಡಿ, ದೇಶಕ್ಕೆ ಸ್ವತಂತ್ರಗೊಂಡು 75 ವರ್ಷಗಳು ಸಂದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ದೇಶದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳ ಆಯೋಜಿಸಿದೆ. ಆದರೆ, ಆರೋಗ್ಯ ಸೌಲಭ್ಯಗಳು ಕಡಿಮೆ ಇರುವ ಗ್ರಾಮೀಣ ಪ್ರದೇಶದಲ್ಲಿ ಮೇಳ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಹಾಗಾಗಿ ಹೋಬಳಿ ಕೇಂದ್ರದಲ್ಲಿನ ಹೆಚ್ಚು ಜನ ಇರುವ ಕಡೆ ಆರೋಗ್ಯ ಶಿಬಿರ ಏರ್ಪಾಡು ಮಾಡಲಾಗಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಇಂದು ಸವಾಲಾಗಿದೆ. ಸರ್ಕಾರ ಶಿಕ್ಷಣ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದೆ. ದೇಶ ಸ್ವಾತಂತ್ರ್ಯ ಪಡೆದಾಗ ಅಕ್ಷರಸ್ಥರ ಪ್ರಮಾಣ ಶೇ.17ರಷ್ಟಿತ್ತು. ಆದರೆ, ಇಂದು ಶೇ.87.88ರಷ್ಟಿದೆ. ಪ್ರಸ್ತುತ ಗಣತಿ ನಡೆದರೆ ಇದು ಶೇ. 95.96 ಇರಲಿದೆ. ಇಂತಹ ಸನ್ನೀವೇಶದಲ್ಲಿ ಆರೋಗ್ಯವೂ ಮುಖ್ಯವಾಗಿದ್ದು, ಆರೋಗ್ಯ ಜಾಗೃತಿ ಕೂಡ ಮುಖ್ಯವಾಗಿದೆ. ಇಂದು ನಾವು ಸೇವಿಸುವ ಅಡುಗೆಎಣ್ಣೆ, ಬೇಳೆ, ಕಾಳುಗಳು, ಕುಡಿಯುವ ಟೀ, ಕಾಫಿ ಪುಡಿಯಲ್ಲಿ ಕಲಬೆರಕೆ ಕಂಡು ಬರುತ್ತಿದೆ ಇವುಗಳ ಬಗ್ಗೆ ಜಾಗೃತರಾಗಬೇಕು ಎಂದು ಡಿ.ಕೆ. ಸುರೇಶ್ ತಿಳಿಸಿದರು.

ಶಾಸಕಿ ಅನಿತಾ ಕುವಾರಸ್ವಾಮಿ ಮಾತನಾಡಿ, ಆರೋಗ್ಯದಲ್ಲಿ ಸಮಸ್ಯೆ ಕಂಡಾಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರೆ ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ, ಒತ್ತಡ ಜೀವನ ಶೈಲಿಯಿಂದ ದೇಹಕ್ಕೆ ವ್ಯಾಯಾಮ ಇಲ್ಲದೆ ಆರೋಗ್ಯದ ಕಡೆ ಗಮನ ನೀಡದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕರೊನಾ ಜನರಿಗೆ ಸಾಕಷ್ಟು ಪಾಠ ಕಲಿಸಿ ಹೋಗಿದೆ. ಕೇವಲ ಆರೋಗ್ಯ ಸಮಸ್ಯೆ ಅಲ್ಲದೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈಗ ಮತ್ತೆ 4ನೇ ಅಲೆ ಭೀತಿ ಎದುರಾಗಿದೆ. ಜನರು ವೈಯಕ್ತಿಕ ಆರೋಗ್ಯದ ಕಡೆ ಗಮನ ನೀಡಬೇಕು. ಈಗ ಗ್ರಾಮದಲ್ಲಿಯೇ ಆರೋಗ್ಯ ಮೇಳ ಆಯೋಜಿಸಿದ್ದು, ತಜ್ಞ ವೈದ್ಯರು ಮನೆ ಬಾಗಿಲಿಗೆ ಬಂದಿದ್ದಾರೆ. ಜನತೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಮುರಳಿ, ಹುಲಿಕೆರೆ - ಗುನ್ನೂರು ಗ್ರಾಪಂ ಅಧ್ಯಕ್ಷೆ ತೇತಾ ಸತೀಶ್ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ತಹಸೀಲ್ದಾರ್ ಎಂ. ವಿಜಯಕುಮಾರ್, ತಾಪಂ ಇಒ ಶಿವಕುಮಾರ್, ಆರ್‌ಸಿಎಚ್‌ಒ ಡಾ. ಪದ್ಮಾ, ತಾಲೂಕು ವೈದ್ಯಾಧಿಕಾರಿ ಡಾ. ಶಶಿಕಲಾ, ವಿವಿಧ ಗ್ರಾಪಂಗಳ ಅಧ್ಯಕ್ಷೆಯರಾದ ಸುನೀತಾಬಾಯಿ, ಚಂದ್ರಮ್ಮ, ಮಂಗಳಗೌರಮ್ಮ, ಶೋಭಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಪಿಡಿಒ ಕೃಷ್ಣಯ್ಯ, ಜೈಶಂಕರ್, ಬಿ.ಪಿ. ಕುಮಾರ್, ರೇವಣಸಿದ್ದೇಶ್ವರ ಬೆಟ್ಟ ವೈದ್ಯ ಡಾ.ಸುನಿಲ್, ಗ್ರಾಪಂ ಸದಸ್ಯರು, ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸ್ವ ಸಹಾಯ ಸಂದ ಮಹಿಳೆಯರು ಭಾಗವಹಿಸಿದ್ದರು.

ರೋಗ ನಿಯಂತ್ರಣದ ಬಗ್ಗೆ ಮಾಹಿತಿ: ಮೇಳದಲ್ಲಿ ವೇದಿಕೆ ಎದುರು ಕಾಳು, ಮಾವಿನಕಾಯಿ, ಮೊಟ್ಟೆ, ತರಕಾರಿಗಳಿಂದ ವಿವಿಧ ಚಿತ್ರ ಬಿಡಿಸಿ ಶೃಂಗಾರ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತರು ಮೇಳದಲ್ಲಿ ಪೌಷ್ಟಿಕ ತರಕಾರಿ, ಹಣ್ಣುಗಳು, ಮೊಳಕೆ ಕಾಳುಗಳು, ತಿಂಡಿ, ತಿನಿಸುಗಳು, ಸೊಪ್ಪು ಸೇರಿ ವಿವಿಧ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಮಲೇರಿಯಾ ರೋಗಲಕ್ಷಣ, ನೀರಿನ ಶುಚಿತ್ವ, ತಾಯಿ ಮತ್ತು ಮಕ್ಕಳ ಆರೋಗ್ಯ, ಗರ್ಭಿಣಿ, ಬಾಣಂತಿಯರಿಗೆ ಸಿಗುವ ಆರೋಗ್ಯ ಸೇವೆ, ಕ್ಷಯ ರೋಗ ನಿಯಂತ್ರಣ ಆರೋಗ್ಯ ಸೇವೆ, ತಂಬಾಕು ನಿಯಂತ್ರಣ, ಮಾನಸಿಕ ಆರೋಗ್ಯ, ಅಂಧತ್ವ ನಿವಾರಣೆ, ಎಚ್‌ಐವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.

ಕೋವಿಡ್ 1, 2 ಮತ್ತು 3ನೇ ಅಲೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಈಗ 4ನೇ ಅಲೆ ಮುನ್ಸೂಚನೆ ಸಿಕ್ಕಿದೆ. ಜನರು ಆರೋಗ್ಯದ ಕಡೆ ಲಕ್ಷ್ಯ ವಹಿಸುವುದು ಅವಶ್ಯಕ. ಪ್ರತಿಯೊಬ್ಬರೂ ಕಡ್ಡಾಯವಾಗಿ ವಾಸ್ಕ್ ಧರಿಸಬೇಕು, ಸಾವಯವ ಆಹಾರ ಪದ್ಧತಿ, ಸಿರಿಧಾನ್ಯ ಬಳಕೆ, ಸೊಪ್ಪು, ಹಣ್ಣು, ತರಕಾರಿ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕು. ಡಿ.ಕೆ. ಸುರೇಶ್, ಸಂಸದ ಗ್ರಾಮೀಣ ಜನರ ಆರ್ಥಿಕ ಸಂಕಷ್ಟ ಅರಿತು ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ಚಿಕಿತ್ಸೆ ದೊರಕಬೇಕು ಎಂಬ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತವಾಗಿ ಸ್ಪಂದಿಸುವ ವಿಶ್ವಾಸ ಇದೆ. ಅನಿತಾ ಕುಮಾರಸ್ವಾಮಿ, ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net