ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಮನವಿ

6 ckm 3
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಕಡ್ಡಾಯಗೊಳಿಸಬೇಕು ಹಾಗೂ ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು. ಅಶೋಕ್‌ ಕೆಂಪನಹಳ್ಳಿ, ಕುಮಾರ್‌ ಆರ್‌.ಶೆಟ್ಟಿ, ದಶರಥರಾಜ್‌ ಅರಸ್‌, ರುದ್ರೇಶ್‌, ಪೂರ್ಣಿಮಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಕಡ್ಡಾಯಗೊಳಿಸಬೇಕು ಹಾಗೂ ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ತೃತೀಯ ಭಾಷೆಯಾದ ಹಿಂದಿಯನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಹೇರಲಾಗುತ್ತಿದೆ. ಕಳೆದ ೨೦೨೪ನೇ ಸಾಲಿನ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೯೦,೭೯೪ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದು, ಈ ವರ್ಷ ವು ಸಂಖ್ಯೆ ಲಕ್ಷಕ್ಕಿಂತ ಅಧಿಕವಾಗಿದೆ. ಹಿಂದಿಯ ಕಡ್ಡಾಯ ಶಿಕ್ಷಣದಿಂದ ಮಕ್ಕಳಿಗೆ ಉಂಟಾಗುತ್ತಿರುವ ಒತ್ತಡವನ್ನು ತೋರಿಸುತ್ತದೆ ಎಂದರು.

ತಮಿಳುನಾಡಿನಲ್ಲಿ ೧೯೬೮ ರಿಂದಲೇ ತ್ರಿಬಾಷಾ ನೀತಿಯನ್ನು ತಿರಸ್ಕರಿಸಲಾಗಿದೆ. ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿದೆ. ಮಹಾರಾಷ್ಟ್ರ ಕೂಡಾ ತ್ರಿಭಾಷಾ ನೀತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ರಾಜ್ಯದಲ್ಲಿಯೂ ತ್ರಿಭಾಷಾ ನೀತಿಯಿಂದ ಯಾವುದೇ ಲಾಭವಿಲ್ಲ. ಜೊತೆಗೆ ಕನ್ನಡಿಗರಿಗೆ ಉದ್ಯೋಗವು ಲಭಿಸುವುದಿಲ್ಲ ಎಂದರು.

ತೃತೀಯ ಭಾಷೆ ಹಿಂದಿ ತೆಗೆದುಹಾಕುವುದರಿಂದ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್ ಭಾಷೆಗಳ ಜೊತೆಗೆ ಇತರ ವಿಷಯಗಳ ಮೇಲೆ ಹೆಚ್ಚಿನ ಗಮನಹರಿಸುತ್ತಾರೆ. ಕನ್ನಡ ಭಾಷೆಗೆ ಆದ್ಯತೆ ನೀಡುವುದರಿಂದ ರಾಜ್ಯ ದ ಭಾಷಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.

ದ್ವಿಭಾಷಾ ನೀತಿಯು ಶಿಕ್ಷಣ ಸಂಪನ್ಮೂಲಗಳನ್ನು ಕನ್ನಡ ಮತ್ತು ಇಂಗ್ಲೀಷ್ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಉತ್ತರ ಭಾರತದ ಅನೇಕ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು ರಾಜ್ಯಕ್ಕೂ ಈ ರೀತಿಯ ಸಮಾನತೆಯನ್ನು ಒದಗಿಸಬೇಕು ಎಂದು ಹೇಳಿದರು.

ರಾಜ್ಯದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿಯೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲೀಷ್ ಶಿಕ್ಷಣ ವನ್ನು ನೀಡಬೇಕು. ತ್ರಿಭಾಷಾ ನೀತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಗತ್ಯ ಒತ್ತಡ ವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಉಪಾಧ್ಯಕ್ಷ ದಶರಥ ರಾಜ್‌ಅರಸ್, ಸಂಘಟನಾ ಕಾರ್ಯದರ್ಶಿ ರುದ್ರೇಶ್, ತಾಲೂಕು ಅಧ್ಯಕ್ಷೆ ಪೂರ್ಣಿಮಾ, ಕಡೂರು ಅಧ್ಯಕ್ಷ ಅಶೋಕ್‌ಶೆಟ್ಟಿ, ಮುಖಂಡರಾದ ಯುವರಾಜ್, ಮಹಮ್ಮದ್ ಹನೀಫ್, ಪಂಚಾಕ್ಷರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net