

ಚಿತ್ರದುರ್ಗ: ವಿಶ್ವದ ಯಾವ ದೇಶದಲ್ಲೂ ಇಲ್ಲದ ತೆರಿಗೆ ಶಿಕ್ಷಣದ ಮೇಲೆ ಭಾರತದಲ್ಲಿ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಈ ನೀತಿ ಸರಿಯಲ್ಲ. ಇದು ನ್ಯಾಯವೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ದೇಶದ 140 ಕೋಟಿ ಜನರ ಪೈಕಿ 1.4 ಕೋಟಿ ಮಂದಿಯಲ್ಲಿ ಭಾರತದ ಅರ್ಧದಷ್ಟು ಸಂಪತ್ತು ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಬಡವರು ಇನ್ನಷ್ಟು ಬಡತನದಲ್ಲಿ ನೊಂದಿ, ರೋಸಿದ್ದಾರೆ. ಬಿಜೆಪಿಯವರ ನಿತ್ಯ ಸುಳ್ಳುಗಳೆ ಇದಕ್ಕೆ ಕಾರಣ ಎಂದು ಕಿಡಿಕಾರಿದರು.
ಮುಂಜಾನೆ ಪೇಸ್ಟ್‌ನಿಂದ ಹಿಡಿದು ಅಂತ್ಯಕ್ರಿಯೆಯ ಊದಿನಕಡ್ಡಿ, ತೆಂಗಿನ ಕಾಯಿಯವರೆಗೂ ಜಿಎಸ್‌ಟಿ ವಿಧಿಸಲಾಗಿದೆ. ಇದರಿಂದ ಶ್ರೀಮಂತರಿಗೆ ಅನುಕೂಲವಾಗಿದೆ. 16.5 ಲಕ್ಷ ಕೋಟಿ ರೂ. ಮಾಫಿ ಮಾಡಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಆದಾಯವಿಲ್ಲದ ಬಹುಸಂಖ್ಯಾತರಾಗಿರುವ ಶೇ 70ರಷ್ಟು ಬಡವರು ಜಿಎಸ್‌ಟಿ ಮೂಲಕ ತೆರಿಗೆ ಕಟ್ಟುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾಹೇಬರು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ದೇಶದಷ್ಟೇ ಜನಸಂಖ್ಯೆ ಹೊಂದಿರುವ ಚೀನಾ ನಾಲ್ಕರಷ್ಟು ಆದಾಯದಲ್ಲಿ ಭಾರತಕ್ಕಿಂತಲೂ ಮುಂದಿದೆ. ಜಿಡಿಪಿ ಗಮನಿಸಿದರೆ, ದೇಶದ ಶೇ 80ರಷ್ಟು ಜನರ ತಲಾ ಆದಾಯ 1.5ಲಕ್ಷ ರೂ.ಗಿಂತ ಕಡಿಮೆ ಇದೆ. ಕೇಂದ್ರದಿಂದ ಬಡವರ ಕಲ್ಯಾಣ ಆಗುತ್ತಿಲ್ಲ ಎಂದು ಹರಿಹಾಯ್ದರು.
ದೇಶದಲ್ಲಿ ಈ ಹಿಂದೆ ಕಪ್ಪು ಹಣವೆಲ್ಲ ಬಿಳಿ ಹಣವಾಗಿ ಪರಿವರ್ತನೆ ಆಗಲು ಮೋದಿ ಅವರ ನೋಟು ಅಮಾನ್ಯೀಕರಣವೇ ಕಾರಣ. 2 ಸಾವಿರ ರೂ. ಮುಖಬೆಲೆಯ ಅಂದಾಜು 26 ಸಾವಿರ ಕೋಟಿ ರೂ., 500ರ ಮುಖಬೆಲೆಯ 1.04 ಲಕ್ಷ ಕೋಟಿ ರೂ. ಕೋಟಾ ನೋಟುಗಳು ಸಿಕ್ಕಿವೆ. ಈ ಕುರಿತು ಬಾಯಿ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದರು.
ದೇಶದ 20 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಎಲ್ಲಿಯೂ ಗ್ಯಾರಂಟಿ ಯೋಜನೆ ಜಾರಿಯಾಗಿಲ್ಲ. ಕಾಂಗ್ರೆಸ್‌ನಿಂದ ಮಾತ್ರ ಬಡವರ, ರೈತರ, ಕಾರ್ಮಿಕರ ಕಲ್ಯಾಣ ಸಾಧ್ಯ ಎಂದರು.