ಶಿಕ್ಷಣದ ಜೊತೆ ಮೌಲ್ಯಯುತವಾಗಿ ಬದುಕಿ

22 ckm 11
ಚಿಕ್ಕಮಗಳೂರಿನ ಶ್ರೀ ಸಾಯಿ ಏಂಜಲ್ಸ್ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು. ವಿಶ್ವಾಸ್, ನಾಗೇಶ್, ವಿಜಯಾ ನಾಗೇಶ್‌ಮ ಕಾರ್ತಿಕ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಎಲ್ಲರೂ ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಮೌಲ್ಯಯುತವಾಗಿ ಬದುಕಬೇಕು. ಯಾರು ಮೌಲ್ಯಯುತವಾಗಿ ಬದುಕುತ್ತಾರೆಯೋ ಅವರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಶ್ರೀ ಸಾಯಿ ಏಂಜಲ್ಸ್ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಅತ್ಯಂತ ಪವಿತ್ರವಾದ, ವಿಶ್ವಕ್ಕೆ ಜ್ಞಾನದ ಬೆಳಕು ಹಾಗೂ ಮೌಲ್ಯವನ್ನು ನೀಡಿದ ದೇಶ. ಹೀಗಾಗಿ ಭಾರತವನ್ನು ವಿಶ್ವಗುರುವಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಶಿಕ್ಷಣದ ಮೂಲಕವೇ ನಾವು ಪರಿವರ್ತನೆಯನ್ನು ತರಬೇಕು. ಪ್ರತಿ ಕುಟುಂಬವೂ ರಾಷ್ಟçದ ಜೊತೆಗೆ ಕೈಜೋಡಿಸಿದಾಗ ವಿದೇಶಗಳಲ್ಲಿಯೂ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೇಳಿಬರಲು ಸಾಧ್ಯವಾಗುತ್ತದೆ. ಇದಕ್ಕೆ ವಿದ್ಯಾರ್ಥಿಗಳ ಸಾಧನೆ ಹಾಗೂ ಸಹಕಾರ ಮುಖ್ಯ ಎಂದರು.

ಐಎಫ್‌ಎಸ್ ಸಾಧಕ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ವಿಶ್ವಾಸ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಿಗುವಂತಾಗಬೇಕು. ವಿದ್ಯಾರ್ಥಿ ದಿಸೆ ಜೀವನದಲ್ಲಿ ಯಶಸ್ಸುಗಳಿಸಲು ಸೂಕ್ತ ಸಮಯ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಇದಕ್ಕಾಗಿ ಏಕಾಗ್ರತೆ ಮತ್ತು ಪರಿಶ್ರಮ ಮುಖ್ಯ ಎಂದು ಪ್ರತಿಪಾದಿಸಿದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಚ್.ಆರ್.ಅಮೃತಾ, ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಮೃತಾ, ದಿಯಾ, ತೇಜಸ್ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಐಎಫ್‌ಎಸ್ ಸಾಧಕ ವಿಶ್ವಾಸ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ನಾಗೇಶ್, ವಿಜಯಾ ನಾಗೇಶ್, ಜಂಟಿ ಕಾರ್ಯದರ್ಶಿ ಕಾರ್ತಿಕ್, ಪ್ರಾಚಾರ್ಯ ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net