ಶಿಕ್ಷಣದ ಜತೆಗೆ ಕೌಶಲ್ಯ ತರಬೇತಿ ಅತ್ಯವಶ್ಯಕ

19-08-Shiva-3
ರಾಯಚೂರಿನ ಜಿ.ಪಂ. ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಉದ್ಘಾಟಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಮುಖ್ಯ ಯೋಜನಾಕಾರಿ ಗುರುನಾಥ ಗೌಡಪ್ಪ, ತಾ.ಪಂ. ಇಒ ಚಂದ್ರಶೇಖರ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಾಥ ಇದ್ದರು.
Published on

ರಾಯಚೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಶಿಕ್ಷಣದ ಜತೆಗೆ ಉದ್ಯೋಗ ಕೌಶಲ್ಯ ತರಬೇತಿ ಅತ್ಯವಶ್ಯವಾಗಿದೆ. ವೃತ್ತಿ ಕೌಶಲ್ಯವಿದ್ದಾಗ ಮಾತ್ರ ಉದ್ಯೋಗ ದೊರೆಯಲು ಸಾಧ್ಯ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀನ ಕೌಶಲ್ಯ ಯೋಜನೆಯಡಿ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ, ನಿಯಮಿತ ಮಾಸಿಕ ವೇತನ ಮತ್ತು ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಪ್ರಧಾನಿಮಂತ್ರಿಗಳ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪ್ರಮುಖ ಕೊಡುಗೆ ನೀಡುವಂತೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಯೋಜನೆಯಡಿ ಗ್ರಾಮೀಣ ಪ್ರದೇಶದ ಯುವಕ, ಯುವಕರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಮಾತನಾಡಿ, ಯೋಜನೆಯಡಿ ತರಬೇತಿ ಪಡೆದ ಯುವ ಜನರು ಸ್ವಾವಲಂಬಿಗಳಾಗಿ ಹಾಗೂ ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತದೆ. ಯೋಜನೆಯಡಿ ಉಚಿತ ತರಬೇತಿ ನೀಡುವುದರ ಜತೆಗೆ ಶೇ.100ರಷ್ಟು ಖಚಿತ ಉದ್ಯೋಗ ದೊರಕಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಯೋಜನಾಕಾರಿ ಗುರುನಾಥ ಗೌಡಪ್ಪ ಮಾತನಾಡಿ, 2014ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಯೋಜನೆ ಮೂಲಕ ಯುವಜನರು ಸುರಕ್ಷಿತ ಉದ್ಯೋಗ ಪಡೆದುಕೊಳ್ಳಲು ಬೇಕಾದ ತರಬೇತಿ ನೀಡುವುದರ ಜತೆಗೆ ಉದ್ಯೋಗವನ್ನು ಒದಗಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಇಒ ಚಂದ್ರಶೇಖರ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಾಥ, ವ್ಯವಸ್ಥಾಪಕ ಶ್ರೀಕಾಂತ ಬನ್ನಿಗೋಳ್, ಸನ್ ಸ್ಕಿಲ್ ಟ್ರೈನಿಂಗ್ ಸಂಸ್ಥೆ ವ್ಯವಸ್ಥಾಪಕ ಪ್ರಮೋದ ದೀಕ್ಷಿತ್, ಇಂಡಸ್ ವೆಲ್ಡ್‌ಟೆಕ್ ಚಾರಿಟೇಬಲ್ ಟ್ರಸ್ಟ್ ಸಂಯೋಜಕ ನಂದಕುಮಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net