ಶಿಕ್ಷಣದ ಜತೆ ಹೋರಾಟವೂ ಮುಖ್ಯ

Dvp
Published on

ಚಿತ್ರದುರ್ಗ: ಶೋಷಿತರು, ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರಿದಿದ್ದು, ಇದಕ್ಕೆ ಕಡಿವಾಣ ಹಾಕಲು ಶಿಕ್ಷಣದ ಜತೆ ಹೋರಾಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಹಾದಿಯಲ್ಲಿ ಯುವಸಮೂಹ ಸಾಗಬೇಕು ಎಂದು ಸಂಜೀವಿನಿ ಟ್ರಸ್ಟ್ ಅಧ್ಯಕ್ಷೆ ಡಾ.ಕೆ.ಸೌಮ್ಯಾ ಸಲಹೆ ನೀಡಿದರು.


ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಕಲಾ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು.


ಅಂಬೇಡ್ಕರ್ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕಿದೆ. ಸಾಮಾಜಿಕ ಹರಿಕಾರರು, ಕಾನೂನು ಹೋರಾಟಗಾರರಾಗಿ ಉತ್ತಮ ಸಮಾಜಕ್ಕಾಗಿ ಶ್ರಮಿಸಿದ ಅವರು, ಮಹಿಳೆಯರ ಹಕ್ಕುಗಳನ್ನು ತೋರಿಸಿಕೊಟ್ಟರು. ಆದ್ದರಿಂದ ಮಹನೀಯರ ಪುಸ್ತಕ ಓದಿದರೆ ಬದುಕಿಗೆ ದಾರಿದೀಪವಾಗಲಿದೆ ಎಂದು ಹೇಳಿದರು.


ಪ್ರೊ.ಎಲ್.ನಾಗರಾಜ್ ಮಾತನಾಡಿ, ಯುವಸಮೂಹ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶ ಕಲ್ಪಿಸಿಕೊಟ್ಟವರಲ್ಲಿ ಅಂಬೇಡ್ಕರ್ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಪೂರಕ ಎಂದು ಅಭಿಪ್ರಾಯಪಟ್ಟರು.


ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಬೇಕು. ದೇಶಕ್ಕೆ ಕೀರ್ತಿ ತರುವ, ಸಾಧಕರಾಗುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.


ಪತ್ರಕರ್ತ ಡಾ.ಸುರೇಂದ್ರನಾಥ್ ಮಾತನಾಡಿ, ಅಂಬೇಡ್ಕರ್ ನೆನಪಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಮುಂದಾಗಿರುವ ಪರಿಷತ್ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪರಿಷತ್ ಜಿಲ್ಲಾ ಸಂಚಾಲಕ ಶಾಂತಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪ್ರಕಾಶ್, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪುರಸ್ಕೃತೆ ಯಶೋಧಮ್ಮ, ಬಸವರಾಜ್, ರವಿಕಿರಣ್, ನಂದೀಶ್, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net