ಶಿಕ್ಷಣದ ಉದ್ದೇಶ ದೇಶದ ಸಾಕ್ಷರತೆ ಹೆಚ್ಚಿಸುವುದಾಗಬೇಕು

33
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಧ್ಯಾಪಕರಿಗೆ ತಾಳ್ಮೆ ಪ್ರಧಾನವಾಗಿರಬೇಕು. ಇಂದು ನಾವು ಕೊಡುವ ಶಿಕ್ಷಣವು 21ನೇ ಶತಮಾನದ ಬೇಡಿಕೆಯನ್ನು ಈಡೇರಿಸುವಂತಿರಬೇಕು. ದೇಶದ ಸಾಕ್ಷರತೆಯನ್ನು ಹೆಚ್ಚಿಸುವುದು ಶಿಕ್ಷಣದ ಉದ್ದೇಶವಾಗಿರಬೇಕು ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ ಹೇಳಿದರು.
ನಗರದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಡಿಎಂ ವಿಶ್ವವಿದ್ಯಾಲಯದ 4ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರ ಬಿಂದುವಾಗಿರಬೇಕು ಮತ್ತು ಉದಾರ ಶಿಕ್ಷಣ ನೀತಿ ಹೊಂದಿರಬೇಕು. ವೈದ್ಯಕೀಯ ಸಂಸ್ಥೆಗಳು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ವಿದ್ಯೆಯು ಬೋಧನೆ, ಕಲಿಕೆ ಮತ್ತು ಅನುಭವಗಳನ್ನು ವದ್ಧಿಸಲು ಸಹಕಾರಿಯಾಗಬೇಕು. ಅಧ್ಯಾಪಕರು ವಿದ್ಯಾರ್ಥಿಗಳ ಅಭಿರುಚಿಯನ್ನು ಅರಿತು ಬೋಧನೆ ಮಾಡಬೇಕು. ಸಂಶೋಧಕರು ಸ್ವಂತ ಜ್ಞಾನದಿಂದ ಸಂಶೋಧನೆ ಮಾಡಬೇಕೆ ವಿನಃ ಹಣ ಮತ್ತು ಸಲಕರಣೆಗಳಿಂದಲ್ಲ ಎಂದರು.
ವರ್ಚುವಲ್ ವೇದಿಕೆಯಲ್ಲಿ ಪಾಲ್ಗೊಂಡಿದ್ದ ಎಸ್‌ಡಿಎಂ ವಿವಿ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವಿಶ್ವವಿದ್ಯಾಲಯದ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಆಶೀರ್ವದಿಸಿದರು.
ಎಸ್‌ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ್ ಕುಮಾರ, ಆಡಳಿತಾಧಿಕಾರಿ ಸಾಕೇತ ಶೆಟ್ಟಿ, ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ. ಜೋಶಿ ಹಾಗೂ ಜೀವಂಧರ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಇತರರಿದ್ದರು.
ಕುಲಸಚಿವ ಡಾ. ಚಿದೇಂದ್ರ ಎಂ. ಶೆಟ್ಟರ ವಾರ್ಷಿಕ ವರದಿ ಮಂಡಿಸಿದರು. ಡಾ. ಆದಿತ್ಯ ಅಗ್ನಿಹೋತ್ರಿ ಪರಿಚಯಿಸಿದರು. ಡಾ. ಅಶ್ವಿನಿ ಎಸ್. ನಿರ್ವಹಿಸಿದರು. ಪ್ರೊ. ಡೇವಿಡ್ ಕೋಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net