

ಕೆ.ಆರ್.ಪೇಟೆ: ಸಾಮಾಜಿಕ ಪ್ರತಿರೋಧದ ನಡುವೆಯೂ ಮಹಿಳಾ ಶಿಕ್ಷಣಕ್ಕೆ ಹೋರಾಟದ ಮೂಲಕ ಮುನ್ನುಡಿ ಬರೆದವರು ಸಾವಿತ್ರಿಬಾಯಿ ಫುಲೆ ಎಂದು ತಾಲೂಕಿನ ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಯನ್ ಸಿ.ಆರ್.ದಿನೇಶ್ ಹೇಳಿದರು.
ತಾಲೂಕಿನ ಬಲ್ಲೇನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಮಹಿಳಾ ಶಿಕ್ಷಣಕ್ಕೆ ಸಾಮಾಜಿಕ ಪ್ರತಿರೋಧವಿತ್ತು. ಬ್ರಿಟಿಷರ ಮೂಲಕ ಬಂದ ಹೊಸ ಚಿಂತನೆಗಳು ಕೆಲವು ಭಾರತೀಯರಲ್ಲಿ ಹೊಸ ಅರಿವು ಮೂಡಿಸಿತು. ಪಾಶ್ಚಾತ್ಯ ಚಿಂತನೆಗಳಿಂದ ಪ್ರಭಾವಿತರಾಗಿ ದೇಶದಲ್ಲಿ ಹಲವು ಸುಧಾರಣಾವಾದಿಗಳು ಹುಟ್ಟಿಕೊಂಡರು. ಸಾಮಾಜಿಕ ಮೌಢ್ಯ ಮತ್ತು ಮಾನವೀಯತೆಗೆ ಕಳಂಕವಾಗಿದ್ದ ಕೆಲವು ಅಂಧಶ್ರದ್ಧೆಗಳ ವಿರುದ್ಧ ಸುಧಾರಣಾವಾದಿಗಳು ಧ್ವನಿಯೆತ್ತಿದರು. ಇದರಲ್ಲಿ ಜ್ಯೋತಿಬಾ ಫುಲೆ ಮತ್ತು ಅವರ ಧರ್ಮಪತ್ನಿ ಸಾಯಿತ್ರಿಬಾಯಿ ಫುಲೆ ನಿತ್ಯ ಸ್ಮರಣೀಯರು ಎಂದರು.
ದೇಶದಲ್ಲಿಂದು ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಕಲಿತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಮೂಲ ಕಾರಣಕರ್ತರು ಸಾವಿತ್ರಿಬಾಯಿ ಫುಲೆ. ಮಹಿಳೆಯರಿಗಾಗಿ ಶಾಲೆ ಆರಂಭಿಸುವ ಮೂಲಕ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿ ನಾಡಿನ ಸಮಸ್ತ ಮಹಿಳಾ ಕುಲಕ್ಕೆ ದಾರಿದೀಪವಾದರು. 19ನೇ ಶತಮಾನದ ಮಧ್ಯಭಾಗದಲ್ಲಿ ಹೆಣ್ಣುಮಕ್ಕಳು ಮತ್ತು ಅಸ್ಪಶ್ಯರ ಮಕ್ಕಳ ಶಿಕ್ಷಣಕ್ಕೆ ಕಣ್ಣಾದವರು. ಅದಕ್ಕಾಗಿಯೇ ಇವರನ್ನು ಅಕ್ಷರದ ಅವ್ವ ಎಂದೂ ಗೌರವದಿಂದ ಕರೆಯುತ್ತಾರೆ. ಇಂತಹ ಅಕ್ಷರದ ಅವ್ವನನ್ನು ನೆನೆದು ಮುನ್ನಡೆಯೋಣ ಎಂದು ದಿನೇಶ್ ಕರೆ ನೀಡಿದರು.
ಉಪನ್ಯಾಸಕಿ ಚೈತ್ರಾ ಅವರು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪನ್ಯಾಸಕ ಜೆ.ಜಿ. ರಾಜೇಗೌಡ ಉಪನ್ಯಾಸ ನೀಡಿದರು.
ವಿಜಯಪುರದ ಶ್ರೀಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಶ್ರದ್ಧಾಂಜಲಿ ಸಲ್ಲಿಸಿ ಶ್ರೀಗಳನ್ನು ಸ್ಮರಿಸಿದರು. ಹಿರಿಯ ಉಪನ್ಯಾಸಕರಾದ ರಂಗರಾಜು, ಉಪನ್ಯಾಸಕರಾದ ಮಂಜುನಾಥ್, ಹಾಲಪ್ಪ, ವೀಣಾ, ಅನಿಲ್‌ಕುಮಾರ್ ಮತ್ತಿತರರಿದ್ದರು.