ಶಿಕ್ಷಣಕ್ಕೆ ಸ್ತ್ರೀಯರು ಆದ್ಯತೆ ನೀಡಲಿ

h25-Banjara 1
Published on

ಹುಬ್ಬಳ್ಳಿ: ಬಂಜಾರ ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು ಎಂದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಆ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಸಬಲೀಕರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಸುಶೀಲಾ ಸಲಹೆ ನೀಡಿದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ ಜೆಸಿ ನಗರದ ಬಂಜಾರ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಂಜಾರ ಮಹಿಳಾ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರ ಸಮಾಜದವರು ದೇಶದ ವಿವಿಧೆಡೆ ವಾಸವಾಗಿದ್ದು, ತಮ್ಮದೇ ಆದ ಕಲೆ, ಸಂಸ್ಕೃತಿ, ಸಂಪ್ರದಾಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಹಿಳೆಯರು ಶಿಕ್ಷಿತರಾಗಿ, ಸಂಘಟಿತರಾದರೆ ಮತ್ತಷ್ಟು ಸಾಧನೆ ಸಾಧ್ಯವಾಗುತ್ತದೆ ಎಂದರು.

ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ತಮ್ಮದೇ ಆದ ಭಾಷೆ, ವಿಶಿಷ್ಟವಾದ ಹಬ್ಬ ಹರಿದಿನಗಳ ಆಚರಣೆಗಳ ಮೂಲಕ ಬಂಜಾರರು ವಿಶಿಷ್ಟತೆ ಹೊಂದಿದ್ದಾರೆ. ವೇಷಭೂಷಣದಿಂದಲೇ ವಿಶೇಷ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ರಾಜ್ಯ ಉಪಾಧ್ಯಕ್ಷೆ ಶೈಲಾ ನಾಯ್ಕ ಮಾತನಾಡಿ, ಬಂಜಾರ ಮಹಿಳೆಯರು ಸಂಘಟಿತರಾಗಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕು ಎಂದರು. ರಾಜ್ಯಮಟ್ಟದ ಪದಾಧಿಕಾರಿಗಳಾದ ರಿಂದಾಬಾಯಿ ರಾಠೋಡ, ಪಾರ್ವತಿ ಚವ್ಹಾಣ, ಹೇಮಾವತಿ ನಾಯ್ಕ, ಪಂಕಜ ನಾಯ್ಕ, ಜಯಲಕ್ಷ್ಮೀ ಚವ್ಹಾಣ, ಕಲಬುರಗಿಯ ಸೋನಾಬಾಯಿ ನಾಯ್ಕ, ಬಾಗಲಕೋಟೆಯ ಮಾಧವಿ ರಾಠೋಡ, ಗದಗನ ಗೀತಾ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ಸಾವಿತ್ರಿಬಾಯಿ ಪ್ರಾರ್ಥಿಸಿದರು. ಶಾಂತಾಬಾಯಿ ಪಮ್ಮಾರ ವಂದಿಸಿದರು. ರೇಷ್ಮಾ ನಾಯ್ಕ ನಿರೂಪಿಸಿದರು.

ಲಂಬಾಣಿ ವೇಷದಲ್ಲಿ ಗಮನ ಸೆಳೆದ ಜಿಪಂ ಸಿಇಒ: ಜಿಪಂ ಸಿಇಒ ಬಿ. ಸುಶೀಲಾ ಅವರು ಲಂಬಾಣಿ ಉಡುಪಿನಲ್ಲಿ ಮಹಿಳಾ ಸಮಾವೇಶ ಉದ್ಘಾಟಿಸಿ ಗಮನ ಸೆಳೆದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಬಂಜಾರ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಹತ್ವದ ನಿರ್ಣಯಗಳು: ಮಹಿಳಾ ಸಮಾವೇಶದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವಾಗ ಅವುಗಳಿಗೆ ಸಮಾಜದ ಯಶಸ್ವಿ ಮಹಿಳೆಯರ ಹೆಸರಿಡಬೇಕು. ಸೇವಾಲಾಲ ತಾಯಿ ಧರ್ವಿುಣಿಬಾಯಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಸೈನ್ಯದ ಕಮಾಂಡರ್ ಜಲ್ಕಾರಿಬಾಯಿ ಮಿಟ್ಟೂ ಭೂಕ್ಯ, ಲಕೀಷಾ ಬಂಜಾರ, ಅವರ ಹೆಸರು ಉಳಿಯುವಂತೆ ಕ್ರಮ ಜರುಗಿಸಬೇಕು. ಸಾಮಾಜಿಕ ಪಿಡುಗಾದ ಸತಿ ಸಹಗಮನ ಪದ್ಧತಿಗೆ ಬಲಿಯಾದ ಯಾಡಿ ಭಿಮಸತ್ತಿ ಹೆಸರಿನಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡ ಎಣ್ಣೆಗೆರೆಯಲ್ಲಿ ಹೆಣ್ಣು ಮಕ್ಕಳ ವಸತಿ ಶಾಲೆ ಮಂಜೂರು ಮಾಡಬೇಕು. ಗೋರ್ ಬಂಜಾರ ಮಹಿಳೆಯರಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ಘೊಷಿಸಬೇಕು. ಲಂಬಾಣಿ ತಾಂಡಾಗಳಲ್ಲಿ ಸಾರಾಯಿ ನಿಷೇಧಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net