ಶಿಕ್ಷಣಕ್ಕೆ ಮೊಬೈಲ್, ಜಾಲತಾಣ ಮುಳುವಾಗದಿರಲಿ: ಡಾ.ಟಿ.ಎಸ್.ನಾಗಾಭರಣ

3
Published on

ಮೈಸೂರು: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಇದುವೇ ಶಿಕ್ಷಣಕ್ಕೆ ಮುಳುವಾಗಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಹೇಳಿದರು.

ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಆಧುನಿಕ ತಂತ್ರಜ್ಞಾನಗಳನ್ನು ಮಾಹಿತಿ, ಸಂಪರ್ಕಕ್ಕಾಗಿ ಇತಿಮಿತಿಯಲ್ಲಿ ವಿನಿಯೋಗಿಸಬೇಕು. ಯುವ ಜನರು ಮಾತೃ ಭಾಷೆ, ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು. ಇದು ಎಲ್ಲರ ಆದ್ಯ ಕರ್ತವ್ಯ ಆಗಬೇಕು ಎಂದರು.

ಶಿಕ್ಷಣದೊಂದಿಗೆ ಆಸಕ್ತಿದಾಯಕ ಕ್ಷೇತ್ರದಲ್ಲಿ ಕೌಶಲ ಮತ್ತು ಸಾಂಸ್ಕೃತಿಕ ಕಲೆಗಳನ್ನು ಮೈಗೂಡಿಸಿಕೊಂಡಾಗ ಜೀವನ ಹಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವಜನರು ಯಾವುದೇ ಒಂದೇ ವೃತ್ತಿಗೆ ಸೀಮಿತವಾಗಬಾರದು. ಆಗ ಆಯ್ಕೆ ಮತ್ತು ವಿವಿಧ ಅವಕಾಶಗಳ ಬಾಗಿಲು ಮುಚ್ಚುತ್ತದೆ. ಯಾವಾಗ ಪ್ರವೃತ್ತಿಯಾಗಿ ವೃತ್ತಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ಕೌಶಲ ಮತ್ತು ಕಲೆಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಬದುಕು ಸುಭದ್ರವಾಗುತ್ತದೆ. ಹೆಣ್ಣು ಮಕ್ಕಳ ಮೇಲೆ ಹೊಣೆಗಾರಿಕೆ ಯಾವಾಗಲೂ ಹೆಚ್ಚು. ಆದ್ದರಿಂದ ಸ್ವಂತ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ರೂಪಿಸಿಕೊಂಡು ಉಜ್ವಲ ಬದುಕು ಕಟ್ಟಿಕೊಳ್ಳಬೇಕು ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ 45 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈಗಿರುವ ಕಟ್ಟಡದ ಮೇಲೆ ಮತ್ತೊಂದು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಹಾಸ್ಟೆಲ್ ಕಟ್ಟಡ ಮೇಲೆ ಮತ್ತೊಂದು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಕ್ಯಾಂಟೀನ್ ಮತ್ತು ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗುವುದು. ಈ ಎಲ್ಲ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ವ್ಯಾಸಂಗ ಮಾಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ನಟ ಶಂಕರ್ ಅಶ್ವತ್ಥ್, ಪ್ರಾಂಶುಪಾಲ ಪ್ರೊ.ಸೋಮಣ್ಣ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಎಚ್.ಕೆ.ಪ್ರಸಾದ್, ಪದಾಧಿಕಾರಿಗಳಾದ ಡಾ.ತುಳಸಿ, ಡಾ.ಎಸ್.ಮಂಜುಳಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net