

ಚಿತ್ರದುರ್ಗ: ಮುಂದಿನ ಯುಗ ಜ್ಞಾನ-ವಿಜ್ಞಾನಗಳ ಯುಗ ಆಗಲಿರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಶ್ರೀ ಜಗದ್ಗುರು ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ, ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಉತ್ತಮ ಶಿಕ್ಷಣ, ಸಂಸ್ಕಾರದಿಂದ ಉನ್ನತ ಸ್ಥಾನಕ್ಕೇರಬಹುದು. ಕಂದಾಚಾರ, ಮೂಢ ನಂಬಿಕೆ ಕೈಬಿಟ್ಟು, ವೈಚಾರಿಕತೆ ರೂಢಿಸಿಕೊಂಡರೆ ಸಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ. ಸೇವೆ ಪರಿಗಣಿಸಿ ರಾಜ್ಯೋತ್ಸವ, ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ಸರ್ಕಾರ ಪ್ರದಾನ ಮಾಡಿರುವುದು ಸಂತೋಷದ ವಿಷಯವೆಂದರು.
ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಡಾ.ಎಂ. ಚಂದ್ರಪ್ಪ, ಮನುಷ್ಯ ಹುಟ್ಟಿನಿಂದ ಸಾರ್ಥಕ ಜೀವನವನ್ನು ಕಟ್ಟಿಕೊಳ್ಳಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್, ದೇವರು, ಧರ್ಮದ ಹೆಸರಲ್ಲಿ ಹಗಲು ದರೋಡೆ ನಡೆಯುತ್ತದೆ. ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಬಸವಣ್ಣ ಅವರ ಆದರ್ಶಗಳನ್ನು ಅಳವಡಿಸಿಕೊಂಡು, ಹೋಮ, ಹವನಗಳಿಂದ ದೂರ ಉಳಿಯಬೇಕಿದೆ. ಸಾಮಾಜಿಕ ಜಾಲತಾಣಗಳು ದಿಕ್ಕು ತಪ್ಪಿಸುತ್ತಿವೆ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಎಂದು ಪಾಲಕರಿಗೆ ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತರಾದ ಡಾ.ಟಿ. ದಿಲೀಪ್ ಕುಮಾರ್, ಡಾ.ವಿ. ಕಮಲಮ್ಮ ಹಾಗೂ ಟಿ. ಸೋಮೇಶ್ ಅವರನ್ನು ಸನ್ಮಾನಿಸಲಾಯಿತು.
ಹಾವೇರಿ ಭೋವಿ ಸಮುದಾಯದ ಜಿಲ್ಲಾಧ್ಯಕ್ಷ ರವಿ ಪೂಜಾರಿ, ಚಿತ್ರದುರ್ಗ ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಬಸವರಾಜ್, ಭೀಮಪ್ಪ, ಮೋಹನ್, ತಿಮ್ಮಣ್ಣ, ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಭೋವಿ ಸಮಾಜದ ಮುಖಂಡರು ಇದ್ದರು.