ಶಿಕ್ಷಣಕ್ಕೆ ಇದೆ ಬದುಕನ್ನು ಸುಧಾರಿಸುವ ಶಕ್ತಿ

CTD SHARAN YUVJNATSVA RAVI D.CHNNANAVRA-----
Published on

ಚಿತ್ರದುರ್ಗ: ಪಾಳೇಗಾರರು ಆಳಿದ ಚಿತ್ರದುರ್ಗ ಧಾರ್ಮಿಕ ಚಳವಳಿ ಮೂಲಕ ಸಮಾನತೆ ಬಿತ್ತಿದ ಜಾಗವಾಗಿದೆ ಎಂದು ಡಿಐಜಿಪಿ ರವಿ ಡಿ. ಚನ್ನಣ್ಣನವರ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಯುವಜನೋತ್ಸವದಲ್ಲಿ ನೈತಿಕ ಪ್ರಜ್ಞೆ ಮತ್ತು ಯುವ ಜನತೆ ಕುರಿತು ಮಾತನಾಡಿದರು.

ಬದುಕನ್ನು ಸುಧಾರಿಸುವ ಶಕ್ತಿ ಶಿಕ್ಷಣಕ್ಕಿದೆ. ಬಡತನ ನಮ್ಮ ಬಹು ದೊಡ್ಡ ಶತ್ರುವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಿನಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಸರ್ಕಾರಿ ನೌಕರಿಯೇ ಅಂತಿಮವಲ್ಲ, ಅದರ ಆಚೆಗೂ ಬದುಕಿದೆ ಎಂದರು.

ನಮಗೆ ನಾವೇ ಉದ್ಧಾರವಾಗಬೇಕು. ಸೋಮಾರಿತನ, ಆಲಸ್ಯಗಳನ್ನು ಬಿಟ್ಟು ಉತ್ತಮ ಜೀವನ ರೂಪಿಸಿಕೊಳ್ಳುವತ್ತ ಈ ಹಬ್ಬದಲ್ಲಿ ಸಂಕಲ್ಪ ಮಾಡಬೇಕು. ಸ್ವಾಭಿಮಾನ ನಮ್ಮಲ್ಲಿರುವ ಪರಮ ಮಿತ್ರ. ಚರಿತ್ರೆ,ಪೂಜೆ, ಪಾಠಗಳಿಂದ ನಮ್ಮ ಬದಲಾವಣೆ ಆಗಬೇಕು. ಬಸವಣ್ಣನವರ ಕಾಯಕ ತತ್ವಕ್ಕೆ ಬೆಲೆ ಕೊಡಬೇಕು.ಪೋಲಿಸ್ ಎಂದರೆ ಭಯವಲ್ಲ, ಅದೊಂದು ಭರವಸೆ ಎಂದು ತಿಳಿಸಿದರು.

ಯುವ ಸಮಾಜ-ಭವಿಷ್ಯದ ಆಯ್ಕೆಗಳು ಕುರಿತು ಮಾತನಾಡಿದ ಧಾರವಾಡ ವಿಸ್ತಾರ ಜಿಂದಗಿಯ ಮಹೇಶ್‌ಮಾಸಾಳ್, ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ. ಸಾಧನೆಗೆ ತಲೆಯಲ್ಲಿ ಹುಚ್ಚು, ಎದೆಯಲ್ಲಿ ಕಿಚ್ಚಿರಬೇಕು. ಬಡತನ, ನೋವು, ಅವಮಾನಗಳಿಗೆ ಎದೆ ಕೊಡಬೇಕು. ಮಕ್ಕಳನ್ನು ಧೈರ್ಯವಂತರನ್ನಾಗಿ ಬೆಳೆಸಬೇಕು ಎಂದರು.

ಧಾರವಾಡದ ಪ್ರಾಧ್ಯಾಪಕ ಡಾ. ಶಂಭುಹೆಗಡಾಳ್ ಮಾತನಾಡಿ, ಮೊದಲು ನಮಗೆ ನಾವು ರೋಲ್ ಮಾಡೆಲ್‌ಗಳಾಗಬೇಕು. ಆತ್ಮ ವಿಶ್ವಾಸ, ಆತ್ಮಬಲ, ಆತ್ಮವಿಕಾಸ, ಆತ್ಮದ ಅಭಿವೃದ್ಧಿ ನಮ್ಮ ಬದುಕಿನ ಗುರಿಯಾಗಬೇಕು. ನಮ್ಮ ಕಾಯಕ ನಮಗೆ ನಾಯಕನಾಗಬೇಕು. ಯುವಕರು ಬದಲಾದರೆ ವ್ಯವಸ್ಥೆ ಬದಲಾಗುತ್ತದೆ ಎಂದರು.

ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮಾತನಾಡಿ, ನಾನು ಬಯಸಿದಂತೆ ಡಾಕ್ಟರ್ ಆದೆ. ಇದು ನನ್ನ ತಂದೆತಾಯಿ ಮಹಾದಾಸೆೆಯೂ ಆಗಿತ್ತು. ಸಾವಿರಾರು ಜನರ ಜೀವ ಉಳಿಸಿದ ತೃಪ್ತಿ ನನ್ನದು. ಹಿಂದುಳಿದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂಬ ಮಹಾದಾಸೆಯಿಂದ ರಾಜಕಾರಣಕ್ಕೆ ಧುಮುಕಿದೆ ಎಂದರು.

ಕರ್ನಾಟಕ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿಯನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು. ಗುರಿ ಸಾಧನೆಗೆ ಆತ್ಮ ಸ್ಥೈರ್ಯ ಮುಖ್ಯ. ಪುಸ್ತಕ ಜ್ಞಾನದೊಂದಿಗೆ ಪ್ರಪಂಚವನ್ನು ಅರಿಯಬೇಕೆಂದರು.

ಯುವ ಜನರು ಮತ್ತು ರಾಷ್ಟ್ರ ಪ್ರಜ್ಞೆ ಕುರಿತು ಮಾತನಾಡಿದ ಇತಿಹಾಸತಜ್ಞ ಡಾ.ಜಿ.ಬಿ. ಹರೀಶ್, ಭಾರತವಿಂದು ಸುರಕ್ಷಿತವಾಗಿಲ್ಲ. 150 ವರ್ಷಗಳಲ್ಲಿ ಭಾರತದ ಗಡಿಭಾಗಗಳನ್ನು ನಾವು ಕಳೆದುಕೊಂಡಿದ್ದೇವೆ. ಶಿಕ್ಷಣಕ್ಕೆ ಆದ್ಯತೆ ನೀಡ ಬೇಕಿದೆ ಎಂದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಡಾ.ಜಿ. ಅನೀಸ್, ಗಾಯತ್ರಿ ಶಿವರಾಮ್, ರುದ್ರಮುನಿಯಪ್ಪ, ಡಾ. ರಾಜೇಶ್, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕೆ.ಎಂ. ವೀರೇಶ್, ಡಿ.ವಿ. ಶರಣಪ್ಪ, ಸಿ. ರುದ್ರಮನಿಯಪ್ಪ ಇತರರು ಇದ್ದರು.

ಬೆಂಗಳೂರಿನ ನ್ಯಾಷನಲ್ ಫೌಂಡೇಶನ್ ನಿರ್ಮಾಣದ ಪಿ.ಎನ್. ರುದ್ರಪ್ಪ ನಿರ್ದೇಶನದ ಕರ್ನಾಟಕದ ರೂವಾರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಕುರಿತ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ.ಎನ್. ಮಮತಾ ನಿರೂಪಿಸಿದರು. ವೈ.ಡಿ. ಬದಾಮಿ ನಿರ್ದೇಶನದ ರೂಪಕವನ್ನು ಬಾಪೂಜಿ ಶಾಲಾ ಮಕ್ಕಳು ಪ್ರದರ್ಶಿಸಿದರು.

ಸಹಜ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಕೊಲ್ಲಾಪುರ ಸಾಯಿಗಾವ್ ಚಿತ್ರದುರ್ಗ ಮಠದ ಶ್ರೀ ಬಸವ ಶಿವಾನಂದ ಸ್ವಾಮೀಜಿ ಮಾತನಾಡಿ, ಶಿವಯೋಗಕ್ಕೆ ಅತಿಹೆಚ್ಚು ಪ್ರಾತಿನಿಧ್ಯ ಕೊಟ್ಟಿರುವುದು ಮುರುಘಾಮಠ ಎಂದರು.

ಶಿಗ್ಗಾವಿ ಶ್ರೀ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ, ಇರಕಲ್ ಶಿವಶಕ್ತಿ ಪೀಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ, ಕವಲೆತ್ತು ಬಸವ ಕೇಂದ್ರದ ಶರಣೆ ಮುಕ್ತಾಯಕ್ಕ, ದೇವರ ಹಿಪ್ಪರಗಿ ಗದ್ದಿಗೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಹೊಸಕರೆ ಶರಣೆ ನೀಲಾಲೋಚನ ತಾಯಿ, ಡಾ. ಬಸವಕುಮಾರ ಸ್ವಾಮೀಜಿ, ಕಾರವಾರ ಬಸವ ಗ್ರಾಮದ ಶರಣ ಬಸವೇಶ್ವರ ಮಹಾತಾಯಿ ಇದ್ದರು.

ಜ್ಞಾನಮೂರ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net