ಶಿಕ್ಷಣ-ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣ ಸಲ್ಲ -ಸಾಹಿತಿ ಡಾ. ಲೋಕೇಶ ಅಗಸನಕಟ್ಟೆ

dvg-1.jpg
Published on

ದಾವಣಗೆರೆ: ಶೈಕ್ಷಣಿಕ ವಲಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣ ನುಸುಳಬಾರದು ಎಂದು ಚಿತ್ರದುರ್ಗದ ಸಾಹಿತಿ ಡಾ. ಲೋಕೇಶ ಅಗಸನಕಟ್ಟೆ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ‘ಎಸ್.ಎಚ್.ಶಿವರುದ್ರಪ್ಪರವರ ಬದುಕು-ಸೇವೆ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ರಾಜಕಾರಣಿ, ಪಕ್ಷದ ಕಾರ್ಯಕರ್ತರು ಪ್ರವೇಶಿಸದೇ ಇದ್ದಲ್ಲಿ ಎರಡೂ ಕ್ಷೇತ್ರ ಉತ್ತಮವಾಗಿ ನಡೆಯಲಿವೆ ಎಂದರು.

ಕೆಲವರ ತತ್ವ ಸಿದ್ಧಾಂತ ಅನುಸರಿಸುತ್ತ ಬಂದವರು ಅಂಥವರಿಗೇ ಕೆಲವು ಸಾಹಿತ್ಯ ಪ್ರಶಸ್ತಿಗಳಲ್ಲಿ ಮಣೆ ಹಾಕುತ್ತಿದ್ದಾರೆ. ವ್ಯಕ್ತಿಯ ಹಿನ್ನೆಲೆ, ಸೃಜನಶೀಲ ಸಾಹಿತ್ಯಕ್ಕೆ ನೀಡಿದ ಕೊಡುಗೆ ಇದ್ಯಾವುದೂ ಮಾನದಂಡವಾಗುತ್ತಿಲ್ಲ ಎಂದು ವಿಷಾದಿಸಿದರು.

ಎರಡು ವರ್ಷದ ಪಂಪ ಪ್ರಶಸ್ತಿ ಆಯ್ಕೆ ವೇಳೆ ಅನನ್ಯ ಸಾಧಕಿ ಸಾರಾ ಅಬೂಬಕ್ಕರ್ ಅವರನ್ನು ಪರಿಗಣಿಸಲಿಲ್ಲ. ಬದಲಾಗಿ ಆಯ್ಕೆ ಸಮಿತಿಯಲ್ಲಿದ್ದ ಬಹುತೇಕ ಸದಸ್ಯರು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡದ ಇಬ್ಬರ ಹೆಸರನ್ನು ಪ್ರಸ್ತಾಪಿಸಿದರು. ಸಮಿತಿ ಸದಸ್ಯನಾಗಿದ್ದ ನಾನು ವಿರೋಧಿಸಿದಾಗ ಉಳಿದವರು ವೋಟ್ ಮಾಡಿ ಆಯ್ಕೆ ಮಾಡಿಕೊಂಡರು. ಸಾರಾ ಅಬೂಬಕ್ಕರ್ ಜೀವಂತ ಇರುವಾಗಲೂ ಪ್ರಶಸ್ತಿ ಘೋಷಣೆ ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಭಾವ್ಯ ಪ್ರಶಸ್ತಿ ಪುರಸ್ಕೃತರ ಸಾಧನೆಗಳ ವಿವರಗಳನ್ನು ಕಲೆ ಹಾಕಿ ಆಯ್ಕೆ ಸಮಿತಿ ಸಭೆಯಲ್ಲಿ ಮಂಡಿಸುವ ಕೌಶಲ ಹಾಗೂ ಗುಣಗ್ರಾಹಿ ವ್ಯಕ್ತಿತ್ವ ರಿಜಿಸ್ಟ್ರಾರ್ ಆಗಿದ್ದ ಎಸ್.ಎಚ್.ಶಿವರುದ್ರಪ್ಪ ಅವರಲ್ಲಿತ್ತು. ಹೀಗಾಗಿ ಪ್ರಶಸ್ತಿಗಳ ಆಯ್ಕೆಯಲ್ಲಿ ಅಧಿಕಾರಿಗಳೂ ವಿರೋಧ ಮಾಡುತ್ತಿರಲಿಲ್ಲ ಎಂದೂ ಅಭಿಮಾನ ವ್ಯಕ್ತಪಡಿಸಿದರು.

ಕಲಾವಿದರು ಅಕಾಡೆಮಿಗಳ ಬಳಿಗೆ ಬರದೆ, ಅಕಾಡೆಮಿಗಳೇ ಅವರ ಬಳಿಗೆ ಹೋಗಬೇಕು. ಈ ಕೆಲಸವನ್ನು ಶಿವರುದ್ರಪ್ಪ ಮಾಡಿದ್ದರು. ಯಕ್ಷಗಾನ ಕಲಾವಿದೆಯೊಬ್ಬರ ಕರೆ ಮಾತ್ರಕ್ಕೆ ಅವರ ಸಮೂಹಕ್ಕೆ ಅವಕಾಶ ನೀಡುವುದಲ್ಲದೆ ಆ ತಂಡವನ್ನು ರಾಷ್ಟ್ರ ಮಟ್ಟಕ್ಕೂ ಪರಿಚಯಿಸಿದರು ಎಂದರು.

ಇಂದು ಜನರನ್ನು ಜಾತಿ-ಧರ್ಮವಲ್ಲದೆ ಆಹಾರದ ಕ್ರಮದ ಮೇಲೂ ವಿಂಗಡಿಸಲಾಗುತ್ತಿದೆ. ಯಾವ ಆಹಾರವೂ ಶ್ರೇಷ್ಟ ಅಥವಾ ಕನಿಷ್ಟವಲ್ಲ. ಈ ಮನೋಭಾವ ಬಂದಾಗ ಮಾತ್ರ ಸಮಗ್ರತೆ ಬರಲಿದೆ ಎಂದು ಹೇಳಿದರು.

ಸಾಹಿತಿ ಬಿ.ಎನ್.ಮಲ್ಲೇಶ್ ಮಾತನಾಡಿ ಚನ್ನಗಿರಿ ತಾಲೂಕು ತ್ಯಾವಣಿಗೆಯವರಾದ ಶಿವರುದ್ರಪ್ಪ, ಜನಸ್ನೇಹಿ ಅಧಿಕಾರಿಯಾಗಿದ್ದರು. ಎಲೆಮರೆಯ ಕಲಾವಿದರನ್ನು ಗುರುತಿಸಿ ಮುನ್ನೆಲೆಗೆ ತಂದರು. ಜಾನಪದ ಕಲಾವಿದರನ್ನು ಗೌರವಿಸುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು ಎಂದರು.

ಅಭಿನಂದನಾ ಗ್ರಂಥಗಳ ಬಿಡುಗಡೆ ವೇಳೆ ಸಾಧಕರನ್ನು ಹೊಗಳುತ್ತೇವೆ. ಕೆಲವರಲ್ಲಿ ಕಂಡುಬರುವ ಅವಗುಣಗಳ ಬಗ್ಗೆ ನಿಂದಿಸಲು ಅಭಿನಿಂದನಾ ಗ್ರಂಥಗಳನ್ನೂ ಹೊರತರಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ವಿದ್ವಾಂಸ ಡಾ.ಟಿ.ಗೋವಿಂದರಾಜು, ವಕೀಲ ಸಾಹುಕಾರ ವಿನಯಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಎನ್.ಎಸ್.ರಾಜು, ಬಿ.ಪರಶುರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net