

ಶನಿವಾರಸಂತೆ: ಶಿಕ್ಷಣ ಸಂಸ್ಥೆಗಳು ಜ್ಞಾನದ ದೇಗುಲ ಎಂದು ಸಾಹಿತಿ, ಲೇಖಕಿ ಶ.ಗ.ನಯನತಾರ ಪ್ರಕಾಶ್‌ಚಂದ್ರ ಅಭಿಪ್ರಾಯಪಟ್ಟರು.
ಸ್ಥಳೀಯ ಬ್ರೈಟ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ, ಅಭಿನಂದನಾ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಕಲಿಸುವ ವಿಚಾರದಲ್ಲಿ ಪೈಪೋಟಿ ನೀಡಬೇಕೆ ಹೊರತು ವ್ಯವಹಾರಿಕವಾಗಿ ಪೈಪೋಟಿ ನೀಡಬಾರದು. ವಿದ್ಯಾಸಂಸ್ಥೆಯೊಂದರ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಪಾಲಕರು, ಶಿಕ್ಷಕರ ಜವಾಬ್ದಾರಿ ಪ್ರಮುಖ. ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವುದರ ಜತೆಯಲ್ಲಿ ಶಿಕ್ಷಣ ಸಂಸ್ಥೆಯೂ ಪ್ರಗತಿ ಸಾಧಿಸುತ್ತದೆ ಎಂದರು.
ಸುಸಂಸ್ಕೃತ ಮತ್ತು ಸಂಸ್ಕಾರಗಳಿಂದ ಕೂಡಿದ ನಮ್ಮ ದೇಶದಲ್ಲಿ ತಾಯಿಯೆ ಮಗುವಿನ ಮೊದಲ ಗುರುವಾಗಿದ್ದು, ಈ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಎಳೆ ವಯಸ್ಸಿನಲ್ಲಿಯೇ ನೈತಿಕತೆ, ಸಂಸ್ಕಾರಗಳಂತಹ ಮೌಲ್ಯಗಳನ್ನು ಕಲಿಸಿಕೊಡಬೇಕು. ಇದರಿಂದ ಮಕ್ಕಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ಇವುಗಳನ್ನು ತನ್ನಲ್ಲಿ ಅಳವಡಿಸಿಕೊಂಡರೆ ಮುಂದೆ ಸಮಾಜದಲ್ಲಿ ಸಂಸ್ಕಾರವಂತ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಕನಸು ಕಾಣಲು ಬಿಡಬೇಕು. ಮಕ್ಕಳ ಕನಸಿಗೆ ಪೋಷಕರು ಪ್ರೋತ್ಸಾಹ ನೀಡಿದರೆ ಮಾತ್ರ ಮಕ್ಕಳು ಕಂಡಿದ್ದ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಶ್ರಮ, ಪ್ರಯತ್ನ ಮತ್ತು ಛಲಗಾರಿಕೆ ಇದ್ದಲ್ಲಿ ಗುರಿ ಸಾಧಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿಯೂ ಪೋಷಕರು ಮಕ್ಕಳಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕಾಗುತ್ತದೆ ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮ ಮಾತನಾಡಿದರು. ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ಗ್ರಾ.ಪಂ. ಸದಸ್ಯೆ ಗೀತ ಹರೀಶ್, ಶಾಲೆಯ ಮುಖ್ಯ ಶಿಕ್ಷಕಿ ಚೈತ್ರಾ, ವಿದ್ಯಾಸಂಸ್ಥೆ ನಿರ್ದೇಶಕಿ ಸೀತಮ್ಮ, ಇತರರಿದ್ದರು. ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.