

ಮಂಗಳೂರು: ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ 145 ನೇ ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಕೆ ಎಸ್ ಅರುಣ್ ಪ್ರಭಾ ಭಾಗವಹಿಸಿ ಮಾತನಾಡಿ ಶಿಕ್ಷಕರು ಪಠ್ಯದಿಂದ ಹೊರತಾಗಿ ಜೀವನ ಮೌಲ್ಯಗಳನ್ನು ಕಲಿಸಿ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುವವರು ಯುವಜನಾಂಗ ಬದಲಾವಣೆಯ ಅಲೆಗಳು ಇಂತಹ ಲಕ್ಷಾಂತರ ಯುವ ಮನಸ್ಸುಗಳನ್ನು ರೂಪಿಸಿದ ಕೀರ್ತಿ ಸಂಸ್ಥೆಯದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಲೋಶಿಯಸ್ ಸಂಸ್ಥೆಗಳ ವರಿಷ್ಠರಾದ ರೆ| ಫಾ | ಮೆಲ್ವಿನ್ ಪಿಂಟೊ ಎಸ್ ಜೆ ಮಾತನಾಡಿ ವ್ಯಕ್ತಿಯ ಸಾಧನೆಯ ಹಿಂದೆ ಅನೇಕರ ಪ್ರೋತ್ಸಾಹ ಇರುತ್ತದೆ ವೈವೀಧ್ಯತೆಗಳು ಬದುಕನ್ನು ಸುಂದರವಾಗಿಸುವುದು ಮಾತ್ರವಲ್ಲದೆ ಏಕತೆ ಮತ್ತು ಸಾಮರಸ್ಯವನ್ನು ಸಂಕೇತ ಎಂದು ಉಬುಂಟು ಪರಿಕಲ್ಪನೆಯನ್ನು ವಿವರಿಸಿದರು.
ಈ ಸಮಾರಂಭದ ವೇಳೆ ಕಳೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು , ಪ್ರಸ್ತುತ ವರ್ಷದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ರಾಷ್ಟ್ರ- ರಾಜ್ಯಮಟ್ಟದ ಕ್ರೀಡೆಗಳ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ರೆ| ಫಾ | ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾಲೇಜಿನ ಉಪಪ್ರಾಚಾರ್ಯೆ ಶ್ರೀಮತಿ ವಿಲ್ಮಾ ಫೆರ್ನಾಂಡಿಸ್ ಹಾಗೂ ಉಪನ್ಯಾಸಕಿ ಶ್ರೀಮತಿ ಅನೀಶಾ ಅಂದ್ರಾದೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿತ್ತಾಧಿಕಾರಿ ರೆ| ಫಾ| ಪ್ರದೀಪ್ ಸಿಕ್ವೇರಾ ಎಸ್ ಜೆ, ಕ್ಯಾಂಪಸ್ ಮಿನಿಸ್ಟರ್ ರೆ| ಫಾ| ಆ್ಯಂಟನಿ ಡೆರಿಕ್, ಡೀನ್ ಶ್ರೀಮತಿ ಕಿರಣ್ ಶೆಟ್ಟಿ, ಕಾರ್ಯಕ್ರಮದ ಸಂಯೋಜಕ ಆಲ್ವಿನ್ ಡಿಸೋಜ, ಕಾಲೇಜಿನ ವಿದ್ಯಾರ್ಥಿ ಮಂಡಲದ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿಸ್ತರಣಾ ಸೇವೆಗಳಾದ ಸಾಮಾಜಿಕ ಕಳಕಳಿ ಕೇಂದ್ರ, ಪರಿಸರ ಕಳಕಳಿ ಕೇಂದ್ರ, ಅಂತರ್ ಧರ್ಮೀಯ ಸಾಮರಸ್ಯ ಕೇಂದ್ರಗಳ ವಿದ್ಯಾರ್ಥಿ ಅಧ್ಯಕ್ಷರು ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಚಾರ್ಯ ಮುರಳಿಕೃಷ್ಣ ಜಿ.ಎಂ ಸ್ವಾಗತಿಸಿದರು. ಉಪನ್ಯಾಸಕಿ ಸಾರಾ ಕ್ರಾಸ್ತಾ ವಂದಿಸಿದರು. ಸಭಾ ಕಾರ್ಯಕ್ರಮದ ತರುವಾಯ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ತನಿಶ್ ಸಾಲ್ಯಾನ್, ಟಿಯಾ ಯುಸ್ಟೆಸ್, ಆರವ್ ಅಗರ್ವಾಲ್, ಶೇಡನ್ ಪಿಂಟೊ, ಏಂಜೆಲ್ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು.