

ಚಿತ್ರದುರ್ಗ: ಮಕ್ಕಳಿಗೆ ಶಿಕ್ಷಣ, ಮೌಲ್ಯಯುತ ಗುಣಗಳ ಜೊತೆಗೆ ಸಂಸ್ಕಾರವನ್ನು ಕಲಿಸಬೇಕಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಸಲಹೆ ನೀಡಿದರು.
ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ವಿದ್ಯಾವಿಕಾಸ ವಿದ್ಯಾಸಂಸ್ಥೆಯಿಂದ 35ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಿಂದ ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳಿಂದ ಓದು, ಪಾಲಕರಿಂದ ಪರಿಶೀಲನೆ ಸರಿಯಾದ ರೀತಿ ನಡೆದಲ್ಲಿ ಮಾತ್ರ ಯಾವುದೇ ಸಂಸ್ಥೆಯಾಗಲಿ ಉತ್ತಮ ಶಿಕ್ಷಣ ಸಂಸ್ಥೆ ಸಾಲಿಗೆ ಸೇರ್ಪಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುತ್ತಿದೆ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಪಾಲಕರು ಗುರಿ ನೀಡಿ, ಅದನ್ನು ತಲುಪುವವರೆಗೂ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ. ಪ್ರೀತಿ, ವಿಶ್ವಾಸದ ಮೂಲಕವೇ ಮನಸ್ಸನ್ನು ಗೆಲ್ಲ ಬೇಕೆ ಹೊರತು ಗದರಿಸುವುದು, ಒಡೆಯುವುದರಿಂದ ಪ್ರಯೋಜನವಿಲ್ಲ ಎಂದು ಕಿವಿಮಾತು ಹೇಳಿದರು.
ಬಡತನದ ನಡುವೆಯೂ ಶಿಕ್ಷಣ ಪಡೆದವರೇ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇದಕ್ಕೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ವಪಲ್ಲಿ ರಾಧಾಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರೇ ಉತ್ತಮ ನಿದರ್ಶನ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಈ ಶಿಕ್ಷಣ ಸಂಸ್ಥೆಯೂ 35 ವರ್ಷದಲ್ಲಿ ಲಕ್ಷಾಂತರ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ಹೇಳಿದರು.
ಭಾರತೀಯ ಮಕ್ಕಳು ಬುದ್ದಿವಂತಿರಿದ್ದಾರೆ. ಅವರಲ್ಲಿರುವ ನೈಪುಣ್ಯತೆ ವಿದೇಶಿಗರಿಗೂ ತಿಳಿದಿದೆ. ಅಲ್ಲಿನ ಪ್ರಧಾನಿಗಳೂ ಹೆಚ್ಚು ಒತ್ತು ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚಿಕ್ಕಂದಿನಿಂದಲೇ ವಿದ್ಯೆ, ಕ್ರೀಡೆ, ಸಾಂಸ್ಕೃತಿಕ ಸೇರಿ ಎಲ್ಲ ರೀತಿಯ ಚಟುವಟಿಕೆಗಳಲ್ಲೂ ತೊಡಗುವಂತೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಎಂಎಲ್ಸಿ ಕೆ.ಎಸ್.ನವೀನ್, ಬಿಇಒ ನಾಗಭೂಷಣ್, ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ನಿರ್ದೇಶಕಿ ಸುನೀತಾ ವಿಜಯಕುಮಾರ್, ಅಕಾಡೆಮಿಕ್ ಆಡಳಿತಾಧಿಕಾರಿ ಡಾ.ಸ್ವಾಮಿ, ಮುಖ್ಯ ಶಿಕ್ಷಕ ಸಂಪತ್‌ಕುಮಾರ್ ಇತರರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.