

ಶಿವಮೊಗ್ಗ:ವೈವಿಧ್ಯತೆಯಿಂದ ಕೂಡಿರುವ ಭಾರತಕ್ಕೆ ಅದ್ಭುತ ಸಂವಿಧಾನ ನೀಡುವಲ್ಲಿ ಡಾ. ಅಂಬೇಡ್ಕರ್ ಅವರದು ಬಹುದೊಡ್ಡ ಕೊಡುಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಬಣ್ಣಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತಿತರ ಇಲಾಖೆಗಳಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಿಂದ ಮಾತ್ರ ಶಕ್ತಿ ಪ್ರದರ್ಶನ ಸಾಧ್ಯ ಎಂಬುದನ್ನು ಅಂಬೇಡ್ಕರ್ ತೋರಿಸಿದ್ದಾರೆ. ಸಂಘಟನೆ ಬೇರೆ ಬೇರೆಯಾಗಿದ್ದರೂ ಉದ್ದೇಶ ಒಂದೇ ಆಗಿರುತ್ತದೆ. ಅಂದು ಬ್ರಿಟಿಷರಿಗೆ ಹೆಚ್ಚಿನ ಶಕ್ತಿ ಇರಲಿಲ್ಲ. ಬದಲಾಗಿ ಅವರು ನಮ್ಮ ವಿರುದ್ಧ ಒಡೆದಾಳುವ ನೀತಿ ಅನುಸರಿಸಿದರು. ಆದರೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಅಂಬೇಡ್ಕರ್ ಅವರಂತಹ ಮಹನೀಯರು ಮಾಡಿದರು ಎಂದು ತಿಳಿಸಿದರು. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಜಾತಿ ವ್ಯವಸ್ಥೆ, ಅಸ್ಪಶ್ಯತೆ ವಿರುದ್ಧ ಹೋರಾಡಿ, ಅನೇಕ ಸುಧಾರಣೆಗಳನ್ನು ತಂದರು. ಮುಖ್ಯವಾಗಿ ಮಾನವೀಯತೆ ಮೆರೆಯಬೇಕು. ನಮ್ಮ ತಂದೆ-ತಾಯಿಯಂತೆ ಅಂಬೇಡ್ಕರ್ ನಮ್ಮ ಜೀವನದಲ್ಲಿ ಬಹಳ ಮುಖ್ಯ ವ್ಯಕ್ತಿಯಾಗಿದ್ದಾರೆ ಎಂದರು. ಶಾಸಕಿ ಶಾರದಾ ಪೂರ‌್ಯಾನಾಯ್ಕ ಮಾತನಾಡಿ, ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಗೌರವ, ಪ್ರೀತಿಯಿಂದ ಕಾಣುತ್ತಿದೆ. ಅವರು ಬೆಳೆದು ಬಂದ ರೀತಿ ಮಾದರಿ. ಮಹಿಳಾ ಸಮಾನತೆ ಬಗ್ಗೆ ಚಿಂತಿಸಿದ ಮೊದಲಿಗರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿ ವಿತರಣೆ ಮಾಡಲಾಯಿತು. ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ತುಂಬಿದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ನೀಡಲಾಯಿತು. ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾದೇಶ ಪತ್ರ ನೀಡಲಾಯಿತು. ಎಸ್‌ಎಸ್‌ಎಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಪುರಸ್ಕರಿಸಲಾಯಿತು. ಅಂಬೇಡ್ಕರ್ ಜೀವನ ಕುರಿತ ಛಾಯಾಚಿತ್ರ ಪ್ರದರ್ಶಿಸಲಾಗಿತ್ತು. ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಬಲ್ಕಿಷ್ ಬಾನು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಉಪಸ್ಥಿತರಿದ್ದರು.
ಸಂವಿಧಾನ ಬದಲಾವಣೆ ಅಸಾಧ್ಯ ಭೂ ಮಂಡಲ ಇರುವವರೆಗೆ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅಂತಹ ಸಂವಿಧಾನ ನೀಡಿದವರು ಧೀಮಂತ ಅಂಬೇಡ್ಕರ್. ಶೋಷಿತ ವರ್ಗಗಳ ಧ್ವನಿಯಾಗಿ ಜೀವನವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಉದಾರವಾದಿ ಕೈಗಾರಿಕಾ ನೀತಿ, ನದಿ ಜೋಡಣೆ, ರಾಷ್ಟ್ರೀಯ ಜಲ ನೀತಿ ನೀಡುವ ಪ್ರಯತ್ನ ಮಾಡಿದ್ದರು. ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಇವರು 9 ಭಾಷೆ ಬಲ್ಲವರಾಗಿದ್ದರು ಎಂದರು. ಜಗತ್ತು ಕಂಡ ಲೋಕ ಜ್ಞಾನಿ ಅಂಬೇಡ್ಕರ್ ಜಗತ್ತು ಕಂಡ ಮುಖ್ಯ ಚಿಂತಕ, ಲೋಕ ಜ್ಞಾನಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮೇಟಿ ಮಲ್ಲಿಕಾರ್ಜುನ ಬಣ್ಣಿಸಿದರು. ವಿಶೇಷ ಉಪನ್ಯಾಸ ನೀಡಿದ ಅವರು, ಒಟ್ಟಾರೆ ಅವರ ಬದುಕಿನ ಚರ್ಚೆ, ವಿಚಾರಗಳು, ಚಿಂತನೆಗಳು ನಮಗೆ ಒತ್ತಾಸೆಯಾಗಿ ನಿಂತಿವೆ. ಹಸನಾದ, ವ್ಯವಸ್ಥಿತ, ಆದರ್ಶ ಬದುಕಿಗೆ ಅವರು ಮಾದರಿ. ಅಸ್ಪಶ್ಯರಾಗಿ ಅನೇಕ ಕಷ್ಟಗಳನ್ನು ಸಹಿಸಿದ್ದರೂ ಭಾರತವೆಂಬ ಭವ್ಯ, ಪ್ರಜಾಸತ್ತಾತ್ಮಕ ದೇಶ ಕಟ್ಟಲು ಸಹಕಾರಿಯಾಗಿದ್ದಾರೆ. ನೆಮ್ಮದಿಯ ಬದುಕಿಗೆ ತತ್ವಗಳನ್ನು ರೂಪಿಸಿದ್ದಾರೆ. ಮಹಿಳಾ ಸಬಲೀಕರಣ, ಮಹಿಳೆಯರ ಸ್ವಾಯತ್ತತೆಗಾಗಿ ಅನೇಕ ಯೋಜನೆಗಳನ್ನು ಅಂದೇ ರೂಪಿಸಿದ್ದರು. ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ಕಟ್ಟಿಕೊಡಲು ಅವರು ಬುದ್ಧ ಮಾರ್ಗ ಅನುಸರಿಸಿದ್ದಾರೆ. ಅಧ್ಯಯನ ಶೀಲರಾಗಿದ್ದ ಅವರು ಖಚಿತ ನಿಲುವು ತಾಳುವ ಮುನ್ನ ಅಧ್ಯಯನ ನಡೆಸುತ್ತಿದ್ದರು. ಇವರ ಚಿಂತನೆಗಳು ನಮಗೆ ಊರುಗೋಲಾಗಿವೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಅವರೊಂದು ಶಕ್ತಿ. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ನಾವೆಲ್ಲ ಒಂದೇ ಎಂಬ ಭಾವನೆಯಿಂದ ರಾಜಕೀಯ, ಸಾಮಾಜಿಕವಾಗಿ ಜತೆಯಾಗಿ ಸಾಗಬೇಕು. ಇದು ಅಂಬೇಡ್ಕರ್ ಅವರ ಆಶಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕು. ಎಸ್.ಎನ್.ಚನ್ನಬಸಪ್ಪ ಶಾಸಕ