

ಮುದ್ದೇಬಿಹಾಳ: ರಾಜಕಾರಣಿಗಳು ಕಟುಕರು, ನಮಗೆ ಸಮಯದ ಪ್ರಜ್ಞೆ ಇಲ್ಲ. ನೀತಿವಂತರೂ ಅಲ್ಲ. ನಾವು ಶಿಕ್ಷಕರ ಮುಂದೆ ನಿಲ್ಲಬೇಕಾದರೆ ತಲೆ ಕೆಳಗೆ ಹಾಕಿ ನಿಲ್ಲಬೇಕು. ಆ ರೀತಿ ಶಿಕ್ಷಕರು ನಡೆದುಕೊಳ್ಳಬೇಕು. ತಾಯಿಯ ಕರುಳಿಗಿಂತ ಶಿಕ್ಷಕರ ಬಾಂಧವ್ಯ ಗಟ್ಟಿಯಾಗಿರಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಹುಡ್ಕೋದ ಟಾಪ್ ಇನ್ ಟೌನ್ ಸಭಾಭವನದಲ್ಲಿ ಮಂಗಳವಾರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಶೇ. 80ರಿಂದ 85ರಷ್ಟು ಗುಣಮಟ್ಟದ ಶಿಕ್ಷಣ ಬರಲಿ. ಶಿಕ್ಷಣ ಒಂದು ಶಿಕ್ಷೆ ಅಲ್ಲ ಭವಿಷ್ಯದ ಜೀವನದ ದಾರಿದೀಪ ಎಂದು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳಲ್ಲಿ ಮೌಲ್ಯಶಿಕ್ಷಣ ಒದಗಿಸುವ ಕಾರ್ಯ ಆಗಬೇಕು ಎಂದರು.
ಗಣಪತಿ ಹಬ್ಬ ಬಂದ್ರೆ ಡಿಸ್ಕೋ ಡ್ಯಾನ್ಸ್ ಮಾಡ್ಸಿ ಗಣಪತಿ ಮುಂದೆ ಕೂಡಿಸಿ ಊರಲ್ಲಿ ಜಗಳಾಡಿ ವಿಘ್ನವನ್ನು ಪರಿಹಾರ ಮಾಡುವ ಬದಲು ವಿಘ್ನವನ್ನು ಬರಮಾಡಿಕೊಳ್ಳುವುದಕ್ಕೆ ಆಸ್ಪದ ನೀಡುತ್ತಿದ್ದೇವೆ. ಶಾಲೆಯಲ್ಲಿ ಉಪಜಾತಿ ಬೀಜಗಳನ್ನು ಬಿತ್ತುತ್ತಿದ್ದೇವೆ. ಶಿಕ್ಷಕರಾದ ನಾವೇ ಶಿಸ್ತು ಬದ್ಧರಾಗಿ ನಡೆದುಕೊಳ್ಳದೇ ಇದ್ದರೆ ಮಕ್ಕಳೆಷ್ಟು ನೀತಿ, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದರು.
ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಮಾತನಾಡಿ, ಕೇಂದ್ರ ಸರ್ಕಾರ 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿದಂತೆ ಇನ್ನೂ ಜಾರಿಗೊಳಿಸಿಲ್ಲ. ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ಮಾರ್ಕ್ಸ್‌ಕಾರ್ಡ್‌ಗಾಗಿ ಶಿಕ್ಷಣವಲ್ಲ ಬೌದ್ಧಿಕ ವಿಕಾಸಕ್ಕಾಗಿ ಶಿಕ್ಷಣ ನೀಡುವ ಕೆಲಸ ಆಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಪ್ರಭಾರ ಬಿಇಒ ಯು.ಬಿ. ಧರಿಕಾರ, ತಾಳಿಕೋಟೆ ತಾಪಂ ಇಒ ಬಸನಗೌಡ ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾದ ನಿಂಗಣ್ಣ ದೊಡಮನಿ, ಎಸ್.ಆರ್. ಕಟ್ಟಿಮನಿ, ಅರವಿಂದ ಹೂಗಾರ, ಗುರು ತಾರನಾಳ, ಎಚ್.ಎ. ಮೇಟಿ, ಸುಮಂಗಲಾ ಕೋಳೂರ, ಎ.ಬಿ. ಬಾಗೇವಾಡಿ, ಎಸ್.ಆರ್. ಕಟ್ಟೀಮನಿ ಹಾಗೂ ಶಿಕ್ಷಕರಿದ್ದರು. ಶಿಕ್ಷಕರನ್ನು, ನಿವೃತ್ತ ಶಿಕ್ಷಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು.