ಶಿಕ್ಷಣ ವ್ಯವಸ್ಥೆ ಪರಿವರ್ತನೆ ಎನ್ಇಪಿ ಗುರಿ

Capture
Published on

ಬೀದರ್: ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್ಇಪಿ) ಭಾರತದ ಶಿಕ್ಷಣ ವ್ಯವಸ್ಥೆಯನ್ನು 2040ರ ವೇಳೆಗೆ ಪರಿವರ್ತಿಸುವ ಗುರಿ ಹೊಂದಿದೆ ಎಂದು ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಹೇಳಿದರು.

ನಗರ ಹೊರವಲಯದ ನಂದಿನಗರದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, 21ನೇ ಶತಮಾನದ ಶಿಕ್ಷಣದ ಆಶಯ ಮತ್ತು ಉದ್ದೇಶಗಳೊಂದಿಗೆ ಸಮಾನವಾದ ಹೊಸ ಶಿಕ್ಷಣ ವ್ಯವಸ್ಥೆ ರೂಪಿಸಲು, ಅದರ ನಿಯಂತ್ರಣ ಮತ್ತು ಆಡಳಿತ ಸೇರಿ ಪ್ರಸ್ತುತ ಶಿಕ್ಷಣ ರಚನೆಯ ಎಲ್ಲ ಅಂಶಗಳನ್ನು ಪರಿಷ್ಕರಿಸಲು ಇನ್ಇಪಿ ಪ್ರಸ್ತಾಪಿಸುತ್ತದೆ ಎಂದು ತಿಳಿಸಿದರು.

ಯುವಕರು ದೇಶದ ಆಥರ್ಿಕತೆ ಮತ್ತು ಅಭಿವೃದ್ಧಿ ಚಾಲಕರಾಗಿದ್ದು, ಶಿಕ್ಷಣ, ಕೌಶಲ ಮತ್ತು ಮೌಲ್ಯಗಳ ಮೂಲಕ ಪರಿವರ್ತನೆ ಮಾಡಬೇಕಾಗಿದೆ. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ನಾವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು. ಬಡತನ, ನಿರುದ್ಯೋಗ ಮತ್ತು ಹಸಿವು ಸೇರಿ ಅನೇಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.
ಕೇಂದ್ರ ಸರ್ಕಾರ ನೂತನ ಕಂಪನಿಗಳನ್ನು ಉತ್ತೇಜಿಸಲು, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹಿಸಲು ಸ್ಟಾರ್ಟಪ್ ಇಂಡಿಯಾ ಅಭಿಯಾನ ಪ್ರಾರಂಭಿಸಿದೆ. ಪದವೀಧರ ವಿದ್ಯಾಥರ್ಿಗಳು ಅವಕಾಶಗಳ ಅನ್ವೇಷಣೆ, ಉದ್ಯಮಿ ಮತ್ತು ಉದ್ಯೋಗ ಸೃಷ್ಟಿಸಲು ರಾಜ್ಯಪಾಲರು ಕರೆ ನೀಡಿದರು.

ಭಾರತದ ಆರ್ಥಿಕತೆಯಲ್ಲಿ ಜಾನುವಾರುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದಾಯ ಮತ್ತು ಸುಸ್ಥಿರ ಜೀವನೋಪಾಯಕ್ಕಾಗಿ ಜಾನುವಾರು ಸಾಕಣೆ ಮಾಡಬೇಕು. ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಪಶು ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿದರ್ೇಶಕ ಡಾ.ಬಿ.ಎನ್. ತ್ರಿಪಾಠಿ, ಪೌಷ್ಟಿಕಾಂಶದ ಭದ್ರತೆಯಲ್ಲಿ ಪಶುಸಂಗೋಪನೆ ಮಹತ್ವದ ಪಾತ್ರ ವಹಿಸುತ್ತದೆ. ಹಾಲು, ಮಾಂಸ ಮತ್ತು ಮೊಟ್ಟೆ ಕ್ಷೇತ್ರಗಳಲ್ಲಿ ಸರಾಸರಿ ವಾಷರ್ಿಕ ಬೆಳವಣಿಗೆ ದರ ಶೇ.5ಕ್ಕಿಂತ ಹೆಚ್ಚು. ರೈತರ ಮತ್ತು ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಿಸಲು ಪಶುಸಂಗೋಪನೆ ಪ್ರಮುಖ ಮೂಲ ಎಂದು ತಿಳಿಸಿದರು.

ಪಶು ಸಂಗೋಪನೆ ಸಚಿವರೂ ಆದ ವಿವಿ ಸಹ ಕುಲಾಧಿಪತಿ ಪ್ರಭು ಚವ್ಹಾಣ್, ಕುಲಪತಿ ಪ್ರೊ.ಕೆ.ಸಿ. ವೀರಣ್ಣ, ಕುಲಸಚಿವ ಪ್ರೊ.ಬಿ.ವಿ. ಶಿವಪ್ರಕಾಶ, ಶಾಸಕರಾದ ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ಡಿಸಿ ಗೋವಿಂದರಡ್ಡಿ, ಎಸ್ಪಿ ಡಿ.ಕಿಶೋರಬಾಬು, ಜಿಪಂ ಸಿಇಒ ಜಹೀರಾ ನಸೀಮ್ ಇತರರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿ: ರಾಜ್ಯದಲ್ಲಿ ಹಾಲು ಉತ್ಪಾದನೆ ಹಾಗೂ ಹಾಲಿನ ಸಹ ಉತ್ಪನ್ನ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಸಲಹೆ ನೀಡಿದರು. ಭಾರತ ವಿಶ್ವದಲ್ಲಿ ಅಧಿಕ ಹಾಲು ಉತ್ಪಾದನೆ ಮಾಡುತ್ತಿದ್ದು, ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ರಾಜ್ಯವೂ ನಂ.1 ಅಥವಾ 2ನೇ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು ಎಂದರು. ಭಾರತ ಕೃಷಿ ಪ್ರಧಾನ ದೇಶ. ಪಶುಪಾಲನೆ, ಮೀನುಗಾರಿಕೆ ನಮ್ಮ ಪರಂಪರೆ. ಹೆಚ್ಚಿನ ಜನ ಕೃಷಿ ಮತ್ತು ಪಶುಪಾಲನೆ ಅವಲಂಬಿಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಅನೇಕ ಸವಾಲುಗಳೂ ಇವೆ. ಪಶು ಕ್ಷೇತ್ರದ ಪದವೀಧರರು ಅಧ್ಯಯನ ಮಾಡಿ ಸವಾಲುಗಳನ್ನು ಬಗೆಹರಿಸುವುದರ ಜತೆಗೆ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ದೇಶದ ಅಭಿವೃದ್ಧಿ ಮತ್ತು ಆತ್ಮನಿರ್ಭರಗೊಳಿಸಲು ಮತ್ತು ಪಶುಗಳನ್ನು ರೋಗಮುಕ್ತ ಮಾಡುವ ಅಗತ್ಯವಿರುವ ನಿಟ್ಟಿನಲ್ಲಿ ಪದವೀಧರರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

1012 ಪದವಿ ಪ್ರದಾನ: ಘಟಿಕೋತ್ಸವದಲ್ಲಿ 1012 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 735 ಸ್ನಾತಕ, 215 ಸ್ನಾತಕೋತ್ತರ ಹಾಗೂ 62 ಡಾಕ್ಟರೇಟ್ ಪದವೀಧರರು ಇದ್ದಾರೆ. 328 ವಿದ್ಯಾಥರ್ಿಗಳು ಖುದ್ದು ಹಾಜರಾಗಿ ಪದವಿ ಸ್ವೀಕರಿಸಿದರು.

ವಿವಿಗೆ 31 ಕೋಟಿ ರೂ. ಆದಾಯ: ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತನ್ನ ಆಂತರಿಕ ಮೂಲಗಳಿಂದ 31.50 ಕೋಟಿ ರೂ. ಆದಾಯ ಗಳಿಸಿದೆ ಎಂದು ಕುಲಪತಿ ಪ್ರೊ.ಕೆ.ಸಿ. ವೀರಣ್ಣ ತಿಳಿಸಿದರು. ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಕೋಳಿ ಮರಿ, ಜಾನುವಾರು, ಮೀನು ಮರಿ, ಮೇವಿನ ಬೀಜ ಮತ್ತು ಇತರ ಕೃಷಿ ಪರಿಕರ ಮಾರಾಟದ ಮೂಲಕ ವಿವಿಗೆ ಆದಾಯ ಸಂಗ್ರಹವಾಗಿದೆ. 2019-20 ಮತ್ತು 2020-21ರಲ್ಲಿ ವಿವಿಗೆ ರಾಜ್ಯ ಸರ್ಕಾರ 243 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಅಲ್ಲದೆ ವಿವಿ ಆರ್ಕೆವಿವೈ, ಐಸಿಎಆರ್, ಅಭಿವೃದ್ಧಿ ಅನುದಾನ ಮತ್ತು ಇತರ ಬಾಹ್ಯ ಅನುದಾನಗಳ ಮೂಲಕ ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಗೆ ಸುಮಾರು 30 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net