ಶಿಕ್ಷಣ ರಂಗದಲ್ಲಿ ಕೆಎಲ್‌ಇ ಸಂಸ್ಥೆ ಮುಂಚೂಣಿ -ಶ್ರೀದೇವಿ ಅಂಗಡಿ

03
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯು ಶಿಕ್ಷಣ ರಂಗದಲ್ಲಿ ಮುಂಚೂಣಿ ಯಲ್ಲಿದೆ. ಕೃಷಿಗೆ ಸಂಬಂಧಿತ ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡಿ ಈ ಭಾಗದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿ ಸ್ಥಾಪಿಸಿದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಹೇಳಿದರು.

ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಲಿಂಗರಾಜ ಮಹಾವಿದ್ಯಾಲಯದ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಕುರಿತು 6 ದಿನಗಳ ಸರ್ಟಿಫಿಕೆಟ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾತ್ಯಕ್ಷಿಕೆ, ಕ್ಷೇತ್ರ ಪರೀಕ್ಷೆಗಳನ್ನು ನಡೆಸುವ ಜತೆಗೆ ರೈತರಿಗೆ ಬೇಕಾದ ಅಧಿಕ ಇಳುವರಿ ನೀಡುವ ತಳಿಗಳ ಬೀಜೋತ್ಪಾದನೆ ಮಾಡಿ ಪೂರೈಸಲಾಗುತ್ತಿದೆ.

ಇಂದಿನ ಕೃಷಿಯಲ್ಲಿ ಅಧಿಕ ರಾಸಾಯನಿಕ ಗೊಬ್ಬರ ಮತ್ತು ಕೀಟ/ರೋಗನಾಶಕಗಳ ಬಳಕೆಯಿಂದ ಅಂತರ್ಜಲದಲ್ಲಿ ರಾಸಾಯನಿಕಗಳ ಸೇರ್ಪಡೆಯಿಂದ ನೀರು ವಿಷಪೂರಿತವಾಗುತ್ತಿದೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾ ಗುತ್ತಿವೆ. ಸಾವಯವ ಕೃಷಿಯಿಂದ ವಿಷಮುಕ್ತ ಆಹಾರದ ಉತ್ಪಾದನೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.

ಪರಿಸರ ಸ್ನೇಹಿ ಸಾವಯವ ತಂತ್ರಜ್ಞಾನಗಳನ್ನು ರೈತರಿಗೆ ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಕೃಷಿ ವಿಜ್ಞಾನ ಕೇಂದ್ರವು ಯುವಕರಿಗೆ ಸಾವಯವ ಕೃಷಿ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕ್ರಮವಾಗಿದೆ ಎಂದರು.
ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎನ್. ಮೂಲಿಯವರು ಉದ್ಘಾಟಿಸಿದರು. ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಿ.ಎನ್. ಶೀಲಿಯವರು, ಸಹಾಯಕ ಪ್ರಾಧ್ಯಾಪಕ ಡಾ. ಸಿ. ಮಲ್ಲನ್ನ, ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್.ಎಸ್. ಹಿರೇಮಠ, ಜಿ.ಬಿ. ವಿಶ್ವನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net