ಶಿಕ್ಷಣ ಯಶಸ್ಸಿಗೆ ಪೂರಕವಾಗಿರಲಿ: ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್ ಸಲಹೆ

10
Published on

ಮೈಸೂರು: ಕೇವಲ ಅಂಕ ಆಧಾರಿತ ಶಿಕ್ಷಣದಿಂದ ಆರೋಗ್ಯವಂತ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಅಂಕಕಷ್ಟೆ ಸೀಮಿತವಾಗದೆ ಜೀವನದ ಯಶಸ್ಸಿಗೆ ಶಿಕ್ಷಣ ಪೂರಕವಾಗುವಂತಿರಬೇಕು ಎಂದು ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್ ಸಲಹೆ ನೀಡಿದರು.
ನಗರದ ಕಲಾಮಂದಿರದಲ್ಲಿ ದಿನೇಶ್ ಕೋಚಿಂಗ್ ಸೆಂಟರ್‌ನಿಂದ ಆಯೋಜಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದರೂ ಮಾನವೀಯ ಸಂಬಂಧ, ಸಮಾಜ ಸೇವೆ, ಮೌಲ್ಯಗಳನ್ನು ಕಾಪಾಡುವಲ್ಲಿ ನೀವು ಎಲ್ಲಿದ್ದೀರಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕು. ಕೇವಲ ಅಂಕ ಆಧಾರಿತ ಶಿಕ್ಷಣದಿಂದ ಆರೋಗ್ಯವಂತ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಅಂಕಕಷ್ಟೆ ಅಲ್ಲದೇ ಜೀವನದ ಯಶಸ್ಸಿಗೆ ಶಿಕ್ಷಣ ಪೂರಕವಾಗಬೇಕು ಎಂದರು.
ವಿದ್ಯಾರ್ಥಿಗಳು ಮಾನಸಿಕವಾಗಿ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು. ಅಲ್ಲದೇ ವಿದ್ಯಾರ್ಥಿಗಳಾದವರಿಗೆ ಸತತ ಜ್ಞಾನದಾಹ ಇರಬೇಕು. ಹೆಚ್ಚು ಅಂಕ ಪಡೆದಾಗ, ಅದಕ್ಕಾಗಿ ಪಟ್ಟ ಶ್ರಮದ ಅರಿವಾಗಿ ಸಂತೋಷವಾಗುತ್ತದೆ. ಆ ಅನುಭವವನ್ನು ಎಲ್ಲರೂ ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸತತ ಪ್ರಯತ್ನ, ಸದ್ಗುಣ ಸಂಪನ್ನತೆಯ ಜೀವನ, ಬುದ್ಧಿಶಕ್ತಿ ಬಳಕೆ ಮಾಡಿದಲ್ಲಿ ಯಶಸ್ವಿ ಜೀವನ ನಡೆಸಲು ಸಾಧ್ಯ. ಇದಕ್ಕೆ ತೆರೆದುಕೊಂಡಲ್ಲಿ ಪರಿಣತಿ ಗಳಿಸಲು ಸಾಧ್ಯವಾಗುತ್ತದೆ. ನೈತಿಕ ಶಿಕ್ಷಣ, ಸ್ಥಳೀಯ ವಿಚಾರಗಳನ್ನು ಒಳಗೊಂಡ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುತ್ತವೆ. ಹಾಗಾಗಿ ನಾವು ಡೊಮ್ಯಾಸ್ಟಿಕ್ ಎಜುಕೇಷನ್‌ಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಆಧುನಿಕ ಯಂತ್ರಜ್ಞಾನ ಬೆಳೆದಂತೆ ಮನರಂಜನೆ ಎನ್ನುವುದು ವಿದ್ಯಾರ್ಥಿಗಳಲ್ಲಿ ಒಂದು ಪಿಡುಗಾಗಿ ಬೆಳೆದಿದೆ. ಮನರಂಜನೆ ಒಂದು ಉಪ್ಪಿನಕಾಯಿಯಂತೆ ಇರಬೇಕೇ ವಿನಾ, ಅದೇ ಮುಖ್ಯವಾಗಬಾರದು. ಜೀವನ ಮನರಂಜನೆ ಅಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಇಂತಹ ಪಿಡುಗಿನಿಂದ ವಿದ್ಯಾರ್ಥಿಗಳನ್ನು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದರು.
ಎಸ್‌ಎಸ್‌ಎಲ್ಸಿ ಹಾಗೂ ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮ ಅಧ್ಯಕ್ಷ ಸ್ವಾಮಿ ವಿರೇಶಾನಂದ ಸರಸ್ವತಿ ಮಹಾರಾಜ್ ಇದ್ದರು. ದಿನೇಶ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಎನ್.ವಿ. ದಿನೇಶ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net