ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿಯಿಲ್ಲದೆ ಬದಲಾವಣೆ ಸಾಧ್ಯವಿಲ್ಲ

25 ckm 4
ಚಿಕ್ಕಮಗಳೂರು ಅಂಬೇಡ್ಕರ್ ಭವನದಲ್ಲಿ ಆದಿಜಾಂಬವ ಪರಿಶಿಷ್ಟ ಜಾತಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿAದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಚ್.ಎಂ.ರುದ್ರಸ್ವಾಮಿ, ಆರ್.ರಮೇಶ್, ಎಸ್.ವೆಂಕಟೇಶ್, ಕೆ.ಎಚ್.ಗಂಗಾಧರ್, ಶೇಖರಪ್ಪ, ಡಾ.ಆನಂದಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತುಳಿತಕ್ಕೊಳಗಾಗಿರುವ ಮಾದಿಗ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇಲ್ಲದಿದ್ದರೆ ಈ ಸಮುದಾಯದ ಸಾಮಾಜಿಕ ಬೆಳವಣಿಗೆ ಸಾಧ್ಯವಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಎಂ.ರುದ್ರಸ್ವಾಮಿ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಆದಿಜಾಂಬವ ಪರಿಶಿಷ್ಟ ಜಾತಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಬೇಕು ಎಂದು ಕಳೆದ ಮೂರು ದಶಕಗಳಿಂದಲೂ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಇತ್ತೀಚಿಗೆ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದೆ. ಆ ಮೀಸಲಾತಿಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಣ್ಣು ತೆರೆಸಿದೆ ಎಂದರು.

ಸAವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಂತೆ ವಿದ್ಯಾವಂತ ಯುವಜನರು ಉನ್ನತ ಶಿಕ್ಷಣದ ಮೂಲಕ ರಾಜಕೀಯ ಸೇರಿದಂತೆ ಆಯಕಟ್ಟಿನ ಹುದ್ದೆ ಏರುವ ಮೂಲಕ ಅಧಿಕಾರ ನಡೆಸುವ ಸ್ಥಾನಕ್ಕೆ ಬಂದಲ್ಲಿ ಮಾದಿಗ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯ ಎಂದು ಹೇಳಿದರು.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಡಾ. ಆನಂದ್‌ಕುಮಾರ್ ಮಾತನಾಡಿ, ಸ್ವಾತಂತ್ರö್ಯ ಪೂರ್ವದಿಂದಲೂ ತುಳಿತಕ್ಕೊಳಗಾಗಿರುವ ಮಾದಿಗ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಸಮುದಾಯ ಮುಂದೆ ಬರಲು ಶಿಕ್ಷಣ ಒಂದು ಶಕ್ತಿಯಾಗಿದೆ. ಮೀಸಲಾತಿ ವಂಚಿತ ಸಮುದಾಯಕ್ಕೆ ವೈಜ್ಞಾನಿಕವಾಗಿ ಮೀಸಲಾತಿಯನ್ನು ಪರಿಷ್ಕರಣೆ ಮಾಡಿ ಒಳ ಮೀಸಲಾತಿ ನೀಡಬೇಕಾಗಿದೆ ಎಂದರು.

ಚಿಕ್ಕಮಗಳೂರಿನ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನ ಸಮನ್ವಯಾಧಿಕಾರಿ ಆರ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಶಿಕ್ಷಣ ಅವಶ್ಯಕತೆಯಾಗದೆ ಅನಿವಾರ್ಯವಾಗಬೇಕು. ಇದು ಆಗದಿದ್ದಲ್ಲಿ ಉತ್ತಮ ಬದುಕು ಸಾಧ್ಯವಿಲ್ಲ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಆದಿಜಾಂಬ ಪರಿಶಿಷ್ಟ ಜಾತಿ ಮಾದಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ವೆಂಕಟೇಶ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೆ.ಎಚ್.ಗಂಗಾಧರ್, ತರೀಕೆರೆ ಆದಿಜಾಂಬವ ನೌಕರರ ಸಂಘದ ಅಧ್ಯಕ್ಷ ಶೇಖರಪ್ಪ, ಮೂಡಿಗೆರೆ ತಾಲೂಕು ಸಂಘದ ಅಧ್ಯಕ್ಷ ಶ್ರೀನಿವಾಸ್, ಎನ್.ಆರ್.ಪುರ ತಾಲೂಕು ಅಧ್ಯಕ್ಷ ಮಂಜಪ್ಪ, ಕಡೂರು ಅಧ್ಯಕ್ಷ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net