

ಹಾಸನ: ಭಾರತದಲ್ಲಿ 59 ಜನರು ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರೈತರಿಗೆ, ಕೃಷಿ ಹಾಗೂ ಕೃಷಿಕರಿಗೆ ಸ್ಥಾನ ಇಲ್ಲ ಎಂದು ಅರವಿಂದ ಚೊಕ್ಕಾಡಿ ವಿಷಾದಿಸಿದರು.
ನಗರದ ಗಾಂಧಿ ಭವನದಲ್ಲಿ ಆರ್. ಪಿ. ವೆಂಕಟೇಶಮೂರ್ತಿ ನೇತೃತ್ವದಲ್ಲಿ ಸೋಮವಾರ ನಡೆದ ಬದುಕಿಗಾಗಿ ಶಿಕ್ಷಣ ಏಕೆ? ಹೇಗೆ? ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಶಿಕ್ಷಕನಾಗಲು, ಉಪನ್ಯಾಸಕನಾಗಲು ಓದಿನ ಅರ್ಹತೆ ಕೇಳುತ್ತಾರೆ. ಆದರೆ ಯಾವುದೇ ಶೈಕ್ಷಣಿಕ ಅರ್ಹತೆ ಪಡೆಯದ ವ್ಯಕ್ತಿಗಳು ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗುತ್ತಿದ್ದಾರೆ. ಅಂತಹವರು ತಮಗೆ ತೋಚಿದ್ದನ್ನೆಲ್ಲಾ ಪಠ್ಯದಲ್ಲಿ ಸೇರಿಸಿ ತಿಪ್ಪೇ ಗುಂಡಿ ಮಾಡುತ್ತಿದ್ದಾರೆ. ಇನ್ನು ಮುಂದಾದರೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಸೇರಿಸಬೇಕೆಂದು ಸಲಹೆ ನೀಡಿದರು.
ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕಲಿಕೆಯಲ್ಲಿ ಹಿಂದಿರುವ ಶೇಕಡ ನಾಲ್ಕರಿಂದ ಐದು ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಲಿಸಬೇಕಾದ ಒತ್ತಡದಲ್ಲಿದ್ದಾರೆ. ಬಹುಸಂಖ್ಯಾತ ಸರಾಸರಿ ಮಟ್ಟದ ವಿದ್ಯಾರ್ಥಿಗಳಿಗೆ ಗಮನ ಕೊಡಲು ಆಗುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಾರೆ. ಕ್ರೀಡಾ ಶಾಲೆ, ಸೈನಿಕ ಶಾಲೆ, ನವೋದಯ ಶಾಲೆ, ಮೊರಾರ್ಜಿ ಶಾಲೆ ಹೀಗೆ ವಿಭಿನ್ನ ಶಾಲೆಗಳಿಗೆ ಸಾಮಾನ್ಯ ನೀತಿ ತರಲು ಸಮನ್ವಯತೆ ಜಾರಿಗೆ ತರಲು ಒಂದು ವ್ಯವಸ್ಥೆ ಆಗಬೇಕೆಂದೂ ತಿಳಿಸಿದರು.
ಉತ್ತಮ ಫಲಿತಾಂಶ ತರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರನ್ನು ಅಪರಾಧಿಯಂತೆ ನೋಡಲಾಗುತ್ತಿದೆ. ಈ ಮನೋಭಾವ ಅಳಿಯಬೇಕು ಶಿಕ್ಷಕರನ್ನು ಮನುಷ್ಯರಂತೆ ನೋಡಬೇಕು. ಮಕ್ಕಳು ಇತರೆ ಕೌಶಲಗಳಲ್ಲಿ ಮುಂದಿರುತ್ತಾರೆ. ಅಂತಹ ಮಕ್ಕಳಿಗಾಗಿ ಪ್ರತ್ಯೇಕ ಶಾಲಾ ವ್ಯವಸ್ಥೆ ಮಾಡುವ ಕುರಿತು ಚಿಂತಿಸಬೇಕೆಂದು ಚೊಕ್ಕಾಡಿ ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಗಮನ ಕೊಡಬೇಕೆಂದರೆ ಆಡಳಿತ ವ್ಯವಸ್ಥೆಗೆ ಪ್ರತ್ಯೇಕ ಸಿಬ್ಬಂದಿ ಇರಲೇ ಬೇಕು. ಸರ್ಕಾರಿ ಆಗಲಿ ಅಥವಾ ಖಾಸಗಿ ಆಗಲಿ ಆಟದ ಮೈದಾನ ಇರಲೇಬೇಕು. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದರೆ ಮಾತ್ರ ಅವರ ಸಾಮರ್ಥ್ಯದ ಸದ್ವಿನಿಯೋಗ ಆಗಿ, ಪಠ್ಯದ ಕಲಿಕೆಯಲ್ಲೂ ಮುಂದೆ ಬರುತ್ತಾರೆ ಎಂದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಬರಹಗಾರ್ತಿ ರೂಪಾ ಹಾಸನ, ರಾಜ್ಯದಲ್ಲಿ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಲಿವೆ. ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ಬಡವರ ಮಕ್ಕಳು ಎಲ್ಲಿ ಓದಬೇಕು. ರಾಜ್ಯದಲ್ಲಿ 6,400 ಏಕೋಪಾಧ್ಯಾಯ ಶಾಲೆಗಳಿಗೆ 50 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 23,342 ಶಾಲೆಗಳಿವೆ. ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 3363 ಮಕ್ಕಳಿಗೆ ರಾಜ್ಯ ಸರ್ಕಾರ 364 ಕೋಟಿ ರೂಪಾಯಿ ಖರ್ಚು ಮಾಡಿದೆ. ಸರ್ಕಾರಿ ವ್ಯವಸ್ಥೆ ಬಲಪಡಿಸಲು ಖಾಲಿ ಇರುವ 43,133 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆಗಬೇಕು. 2028ರ ಹೊತ್ತಿಗೆ 24,807ಪ್ರೌಢಶಾಲಾ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಎಸ್.ಜಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನೀಡಿದ್ದ 90 ಪುಟಗಳ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಾದದಲ್ಲಿ ಗುರುದತ್ ರಾಜ್, ತೇಜಸ್ವಿ, ಧರ್ಮೇಶ್, ಬಿ.ಎಸ್.ದೇಸಾಯಿ, ತಿಮ್ಮೇಶ್ ಪ್ರಭು, ಹುಲ್ಲೇಕೆರೆ ಕುಮಾರ್, ಲಕ್ಷ್ಮೀ ದೇವಿ ದಾಸಪ್ಪ, ಪ್ರಮೀಳಾ, ಆರ್. ಪಿ. ವೆಂಕಟೇಶಮೂರ್ತಿ, ಮೋಹನ್ ಮಟ್ಟನವಿಲೆ, ಸೃಜನ್, ಬಾಲರಾಜ್, ವನಜಾ ಸುರೇಶ್, ಪೃಥ್ವಿ ಎಂ.ಜಿ.ರಮೇಶ್ ಹಾಸನ್ ಇತರರು ಉಪಸ್ಥಿತರಿದ್ದರು.