ಶಿಕ್ಷಣ ಪಡೆದು ಸಮಾಜದ ಉನ್ನತಿಗೆ ಕೊಡುಗೆ ನೀಡಿ

kdr kuruba
ಕಡೂರಿನಲ್ಲಿ ಕನಕ ನೌಕರರ ಸಂಘದಿಂದ ಕುರುಬ ಸಮಾಜದ ಮಕ್ಕಳನ್ನು ಪುರಸ್ಕರಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಪಿ.ಎನ್.ರವೀಂದ್ರ, ಲೋಕೇಶ್, ಎಚ್.ಕೆ.ತಿಪ್ಪೇಶ್, ಮೋಹನ್‌ಕುಮಾರ್, ಶರತ್ ಕೃಷ್ಣಮೂರ್ತಿ ಇತರರಿದ್ದರು.
Published on

ಕಡೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಪ್ರತಿಭಾವಂತ ಮಕ್ಕಳು ಸಮಾಜದ ಉನ್ನತಿಗೆ ಕೊಡುಗೆ ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಭಾನುವಾರ ತಾಲೂಕು ಕನಕ ನೌಕರರ ಸಂಘದಿಂದ ಕುರುಬ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ಹಾಗೂ ಕುರುಬ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಏರ್ಪಡಿಸಿದ್ದ ಗೌರವ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿ, ಈ ಹಿಂದೆ ಶಿಕ್ಷಣ ಪಡೆಯಲು ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಸದ್ಯ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. ಹಲವು ಒತ್ತಡಗಳ ನಡುವೆಯೂ ಪಾಲಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಶಿಕ್ಷಣದಿಂದ ಸಮಾಜ ಬದಲಾವಣೆಗೊಳ್ಳಲು ಸಾಧ್ಯವಾಗಲಿದೆ ಎಂದರು.

ಹಿಂದುಳಿದ ವರ್ಗಗಳಿಗೆ ಸೇರುವ ಕುರುಬ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ದೇವರಾಜು ಅರಸು ಅವರ ಕೊಡುಗೆ ಅಪಾರ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಹಾವನೂರು ಆಯೋಗದ ವರದಿಯ ಅನುಷ್ಠಾನದಿಂದ ನಿಗದಿ ಪಡಿಸಿದ ಶೇ.15ರಷ್ಟು ಮೀಸಲಾತಿಯಲ್ಲಿ ಕಳೆದ 35 ವರ್ಷಗಳಿಂದ ಸಮಾಜದಲ್ಲಿ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಯಿತು. ಮೀಸಲಾತಿ ಕೊಡುಗೆಯ ಪರಿಣಾಮ ಸಮಾಜದಲ್ಲಿ ಅನೇಕರು ನೌಕರರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಹೆಚ್ಚು ಅಂಕಗಳಿಸಿದ ಸಮಾಜದ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಹೆಚ್ಚಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಬೇತಿ ಆಯೋಜನೆಯಿಂದ ಪೂರಕವಾಗಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಇದಕ್ಕೆ ಸಮಾಜದ ಸಂಘಟನೆ ಮೂಲಕ ಬಡ ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪ್ರೋತ್ಸಾಹಿಸುವ ಕಾರ್ಯನಿರಂತರವಾಗಬೇಕಿದೆ ಎಂದರು.

ಸಮಾಜದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಗುರುಗಳು, ಪಾಲಕರು ವಿದ್ಯಾರ್ಥಿಗಳನ್ನು ಗುರಿ ಮುಟ್ಟಿಸಬೇಕಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಗೌರವ ಸಲ್ಲಿಸಬೇಕಿದೆ. ಜಯಂತಿ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡದೆ ಇಂಥ ಪ್ರತಿಭಾ ಪುರಸ್ಕಾರಗಳಿಗೆ ಪ್ರಾಮುಖ್ಯತೆ ನೀಡಿದಾಗ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದಂತಾಗಲಿದೆ. ಕೂಲಿ ಕಾರ್ಮಿಕರು ಸಹ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಈ ಬಾರಿ ರಾಜ್ಯದಲ್ಲಿ ಕುರುಬ ಸಮಾಜದ 6 ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರುವುದು ಹೆಮ್ಮೆಯ ಸಂಗತಿ. ಇಂಥ ಕಾರ್ಯಕ್ರಮ ನೌಕರರ ಸಂಘದಿಂದ ಪ್ರತಿ ವರ್ಷ ನಡೆಯಬೇಕಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕನಕ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ತಿಪ್ಪೇಶ್, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಭೋಗಪ್ಪ, ಜಿಪಂ ಮಾಜಿ ಸದಸ್ಯರಾದ ಶರತ್ ಕೃಷ್ಣಮೂರ್ತಿ, ವನಮಾಲಾ ದೇವರಾಜ್, ತೋಟದಮನೆ ಮೋಹನ್‌ಕುಮಾರ್, ಬಿಇಒ ತಿಮ್ಮಯ್ಯ, ಎಸ್.ಎಸ್.ದೇವರಾಜ್, ಕನಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕೆಂಪಸಿದ್ದಯ್ಯ, ವೈ.ಬಿ.ಹನುಮಂತಪ್ಪ, ಕೆ.ಆರ್.ಸುರೇಶ್, ರಾಜು ಒಡೆಯರ್, ಕೆ.ಎಚ್.ಶಂಕರ್, ಹರೀಶ್, ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net