

ಕಲಬುರಗಿ: ಸಮಗ್ರ ಭಾರತದ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದು ಸ್ವಾಗತಾರ್ಹ. ಆದರೆ ಕೆಲ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯಕಾರಿ ಬೈಠಕ್ ಉದ್ಘಾಟಿಸಿದ ಅವರು, ಮಗುವಿನ ಮೆದಳು ಪರಿಪೂರ್ಣ ಬೆಳೆಯಲು ಐದು ವರ್ಷ ಬೇಕು. ನಂತರ ಶಾಲೆಗೆ ಕಳಿಸಿದರೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಉತ್ತಮ ಎಂಬ ಅಭಿಪ್ರಾಯವಿದೆ. ಆದರೆ ಕೇಂದ್ರ ಸರ್ಕಾ ರ ಶಿಶುವಿಹಾರ ಆರಂಭಿಸಲು ಮುಂದಾಗಿದೆ. ಮೂರು ವರ್ಷಕ್ಕೇ ಶಾಲೆೆಗೆ ಕಳಿಸುವುದರಿಂದ ಮಕ್ಕಳ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ಐದು ವರ್ಷದ ನಂತರವೇ ಶಾಲೆಗೆ ಕಳಿಸುವಂತೆ ಬದಲಾವಣೆ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.
ಸಂಘ ಎಂದರೆ ಸಮಾಜ, ಸಮಾಜ ಎಂದರೆ ಸಂಘ. ಬಹುದೊಡ್ಡ ಸಮಾಜದ ಪ್ರೀತಿಯನ್ನು ನಾವು ಗಳಿಸಬೇಕು. ಸಮಾಜದ ಬಗ್ಗೆ ಚಿಂತನೆ ಮಾಡಿದಾಗ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ. ಎಲ್ಲ ಜಾತಿ ಜನಾಂಗದವರನ್ನು ಪ್ರೀತಿಸುವ ಮನೋಭಾವನೆ ನಮ್ಮಲ್ಲಿ ಮೂಡಬೇಕು ಎಂದರು.
ವಿದ್ಯಾಭಾರತಿ ದಕ್ಷಿಣ ಮತಕ್ಷೇತ್ರದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಲಿಂಗಂರೆಡ್ಡಿ, ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ, ವಿದ್ಯಾಭಾರತಿ ಅಧ್ಯಕ್ಷ ಪರಮೇಶ್ವರ ಹೆಗಡೆ, ಗೌರವಾಧ್ಯಕ್ಷ ಚನ್ನವೀರಪ್ಪ ಗುಡ್ಡಾ, ವಸಂತ ಮಾಧವ ಕಲ್ಲಡ್ಕ, ಭೀಮರೆಡ್ಡಿ, ತಾರಾ ಕಾಳಿಚರಣ, ಮಹಿಪಾಲರೆಡ್ಡಿ, ಸುಂದರ, ನರಸಿಂಹ ಹಾಗೂ ವಿದ್ಯಾಭಾರತಿ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದರಿಂದ ಜನರ ಮನಸ್ಥಿತಿ ಬದಲಾಗಿದೆ. ನಾವು ಹಿಂದುಳಿದವರು ಎಂಬ ಭಾವನೆ ಕ್ರಮೇಣ ದೂರ ಆಗುತ್ತಿದೆ. ಇನ್ನು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕಿದೆ.
| ಜಿ.ಆರ್.ಜಗದೀಶ
ವಿದ್ಯಾಭಾರತಿ ಸಹ ಸಂಘಟನಾ ಕಾರ್ಯದರ್ಶಿ