

ಬಸವಕಲ್ಯಾಣ: ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಸ್ಥಿತ್ಯಂತರಕ್ಕೆ ಅನುಗುಣವಾಗಿ ಸರ್ಕಾರ ಶಿಕ್ಷಣದ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುತ್ತಿದ್ದು, ಶಿಕ್ಷಕರು ಭಾರತೀಯ ಸಂಸ್ಕೃತಿ, ಭಾಷೆ, ಜ್ಞಾನ, ನೀತಿಶಾಸ್ತ್ರ ಮತ್ತು ಬಡಕಟ್ಟು ಸಂಪ್ರದಾಯಗಳು ನೆಲೆಗೊಂಡಿರುವ ಶಿಕ್ಷಣವನ್ನು ಪಡೆದು ಪರಿಣಿತರಾಗಬೇಕಾಗಿದೆ ಎಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಸದಸ್ಯ ಪ್ರೊ.ಜಿ.ಆರ್.ಅಂಗಡಿ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಬುರಗಿಯ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಮತ್ತು ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಮಗ್ರ ಶಿಕ್ಷಕರ ಶಿಕ್ಷಣ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿರುವ ಎರಡು ವರ್ಷದ ಬಿ.ಇಡಿ ಕೋರ್ಸ್ಗಳು ೨೦೩೦ರ ವೇಳೆಗೆ ಮುಚ್ಛಲ್ಪಡುತ್ತವೆ. ನಂತರ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದ ನಾಲ್ಕು ವರ್ಷದ ಬಿ.ಇಡಿ, ಕೋರ್ಸ್ನ್ನು ಪ್ರಾರಂಭಿಸಲು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ನಿರ್ಧರಿಸಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎ. ವಿ. ಕರಬಸನಗೌಡ್ರು ಮಾತನಾಡಿ, ವಿದೇಶದಲ್ಲಿ ಭಾರತೀಯ ಶಿಕ್ಷಕರಿಗೆ ಬಹಳಷ್ಟು ಬೇಡಿಕೆ ಇರುವದರಿಂದ ಹಾಗೂ ಮುಂದಿನ ಪೀಳಿಗೆಯನ್ನು ಉತ್ತಮ ರೀತೀಯಲ್ಲಿ ರೂಪಿಸುವ ಸಲುವಾಗಿ ಶಾಲಾ ಶಿಕ್ಷಕರನ್ನು ತಯಾರಿಸಬೇಕಾಗಿದೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಡೀನ್ ಡಾ.ಮಲ್ಲಿಕಾರ್ಜುನ ಕನಕಟ್ಟೆ ಮಾತಾನಾಡಿ, ನಾಲ್ಕು ವರ್ಷದ ಬಿ.ಇಡಿ ಕೋರ್ಸ್ ಪ್ರಾರಂಭ ಮಾಡಬೇಕಾದರೆ ಭೂ ದಾಖಲೆಗಳು, ಮೂಲ ಸೌಲಭ್ಯ ಹಾಗೂ ಅರ್ಹತೆ ಹೊಂದಿದ ಉಪನ್ಯಾಸಕ ವರ್ಗದವರನ್ನು ಹೊಂದುವುದು ಕಡ್ಡಾಯವಾಗಿದೆ ಎಂದರು.
ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಬಸವಕಲ್ಯಾಣ ಶಾಲಾ ಕಾಲೇಜುಗಳ ನಿರ್ದೇಶಕ ಡಾ.ಬಸವರಾಜ ಎವಲೆ ಮಾತಾನಾಡಿ, ಎಲ್ಲ ಬಿ.ಇಡಿ ಕಾಲೇಜುಗಳು ನಾಲ್ಕು ವರ್ಷದ ಬಿ.ಇಡಿ ಕೋರ್ಸ್ನ್ನುಪಡೆಯಬೇಕಾದರೆ ಸರ್ಕಾರದಿಂದ ಹಾಗೂ ವಿಶ್ವವಿದ್ಯಾಲಯದಿಂದ ನೀರಾಪೇಕ್ಷಣಾ ಪತ್ರ ತೆಗೆದುಕೊಳ್ಳುವ ಕಾರ್ಯ ಶೀಘ್ರದಲ್ಲೇ ಪಡೆಯುವುದು ಅನಿವಾರ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ರಾಚಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಾವಿತ್ರಿ ಬೀಳಗಿ, ಗೋದುತಾಯಿ ಮಹಿಳಾ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕಲ್ಪನಾ ಭೀಮಳ್ಳಿ, ಉಪನ್ಯಾಸಕರಾದ ನಿಲೇಶಕುಮಾರ ಟೊಂಪೆ, ಸಂಗೀತಾ ಕೋಳುರು, ಕವಿತಾ ಮಠಪತಿ, ಕೈಲಾಸ ಮಂಗಲಗಿ, ರೂಪೇಶ ಭೋಸ್ಲೆ, ಸಂಜೀಕುಮಾರ, ರಮೇಶ ಗರುಡಕರ್, ಶಿವಾನಂದ ಬಿರಾದಾರ, ಸಿದ್ದಲಿಂಗಪ್ಪ ಕಣ್ಣಿ, ಲಕ್ಷ್ಮೀಕಾಂತ ಖಂಡಾಳ, ಸುಂದ್ರಬಾಯಿ, ಬಸವರಾಜ ಕಾಸ್ಗೆ ಇದ್ದರು. ಬಸವರಾಜ ಸೇರಿ ಸ್ವಾಗತಿಸಿದರು. ಕವಿತಾ ಮಠಪತಿ ವಂದಿಸಿದರು. ಡಾ.ಸುವರ್ಣಾ ರೆಡ್ಡಿ ನಿರೂಪಣೆ ಮಾಡಿದರು.