ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

IMG_20220821_134022
Published on

ಬೀದರ್: ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಹಣ, ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಮತ್ತು ಮೌಲ್ಯಗಳನ್ನು ಕಲಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಸಲಹೆ ನೀಡಿದರು.

ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಎಲ್ಲರೂ ಸೇರಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾಗಿದೆ. ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ಕನಕದಾಸರು ತಮಗೆ ಸಿಕ್ಕ ಬಂಗಾರವನ್ನು ಸಮಾಜಕ್ಕೆ ಒಪ್ಪಿಸಿದ್ದರು. ಬೊಮ್ಮಗೊಂಡೇಶ್ವರರು ತಮ್ಮ ಚಮತ್ಕಾರದಿಂದ ನೀರು ದೊರಕಿಸಿಕೊಟ್ಟರು. ಅವರು ಒಂದು ಜಾತಿ, ಧರ್ಮಕ್ಕಾಗಿ ಕೆಲಸ ಮಾಡಲಿಲ್ಲ. ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದು ಬಣ್ಣಿಸಿದ ಅವರು, ಇಂದಿನ ದಿನಗಳಲ್ಲಿ ಇಂಥ ಅಭಿನಂದನಾ ಸಮಾರಂಭಗಳ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳು ಮತ್ತು ಸಮಾಜದ ಸಾಧಕರನ್ನು ಸತ್ಕರಿಸಿ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.

ಸಿಂಧುತ್ವ ಪ್ರಮಾಣಪತ್ರ ಸಮಸ್ಯೆ ನಿವಾರಣೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ನೂರಕ್ಕೂ ಹೆಚ್ಚಿನ ಸಿಂಧುತ್ವ ಸಮಸ್ಯೆ ಪರಿಹರಿಸಲಾಗಿದೆ. ಜಿಲ್ಲಾಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂದರು.

ಔದತಪುರದ ಶ್ರೀ ಮಚ್ಚೇಂದ್ರನಾಥ ಮಹಾರಾಜ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಅಮೃತರಾವ ಚಿಮಕೋಡೆ ಅಧ್ಯಕ್ಷತೆ ವಹಿಸಿದ್ದರು. ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ, ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ್, ಪಂಡಿತರಾವ ಚಿದ್ರಿ, ಭೀಮಸಿಂಗ್ ಮಲ್ಕಾಪುರ, ಬಸವರಾಜ ಮಾಳಗೆ, ಇಂದುಮತಿ ಚಿದ್ರಿ, ರತಿಕಾಂತ ಮೇತ್ರೆ, ಹಣಮಂತ ಮಲ್ಕಾಪುರೆ, ಕೆ.ಡಿ. ಗಣೇಶ, ಬಕ್ಕಪ್ಪ ನಾಗೂರೆ, ಮಾಳಪ್ಪ ಅಡಸಾರೆ, ಪೀರಪ್ಪ ಯರನಳ್ಳಿ, ಚಂದ್ರಕಾಂತ ಮೇತ್ರೆ, ಬೊಮ್ಮಗೊಂಡ ಚಿಟ್ಟಾವಾಡಿ, ತುಕಾರಾಮ ಚಿಮಕೋಡೆ, ಸಚಿನ್ ಮಲ್ಕಾಪುರೆ, ರಮೇಶ ಬಿರಾದಾರ್, ದೀಪಕ ಚಿದ್ರಿ, ಕಲ್ಲಪ್ಪ ಬೆನಕನಳ್ಳಿಕರ್, ಅಮೀತ್ ಸೋಲಪುರ, ನಾಗೇಶ ಜಾನಕನೋರ್, ಲಕ್ಷ್ಮಣ ಮೇತ್ರೆ, ಸುಭಾಷ ನಾಗೂರೆ, ಸಂತೋಷ ಮುದ್ದಾ ಇತರರಿದ್ದರು.

ಸಾಧಕರಿಗೆ ಗೌರವ: ಸಮಾರಂಭದಲ್ಲಿ 500ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net