

ಹುಲಸೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಶರಣು ಸಲಗರ ಹೇಳಿದರು.
ಗೋರ್ಟಾ (ಬಿ) ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲಾ ಪ್ರಾರಂಭೋತ್ಸವಕ್ಜೆ ಎಲ್ಲ ಮಕ್ಕಳು ಹಾಗೂ ಪಾಲಕರು ಮೊದಲ ದಿನವೇ ಇಷ್ಟೊಂದು ಪ್ರಮಾಣದಲ್ಲಿ ಶಾಲೆಗೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತವಪಡಿಸಿದರು.
ಗೋರ್ಟಾ ಶಿಕ್ಷಣಕ್ಕೆ ಒತ್ತು ನೀಡಿದ ಗ್ರಾಮ ಇದಾಗಿದ್ದು, ಐತಿಹಾಸಿಕ ಹಿನ್ನಲೆ ಹೊಂದಿದೆ. ಗ್ರಾಮದಲ್ಲಿ ಸರ್ಕಾರ ಕನಸಿನ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಸಜ್ಜಿತ ಕಟ್ಟಡದೊಂದಿಗೆ ಎಲ್ಲ ಮೂಲ ಸೌಲಭ್ಯದೊಂದಿಗೆ ಪ್ರಾರಂಭಿಸಿದ್ದು, ಪಾಲಕರು ಸಹಕರಿಸಬೇಕು. ತಾಲೂಕಿನ ಶಿಕ್ಷಣ ಸಮಿತಿ ಅಧ್ಯಕ್ಷನಾಗಿದ್ದು, ಶಿಕ್ಷಣ ಸುಧಾರಣೆಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲ್ಲೂಕು ದಂಢಾಧಿಕಾರಿ ಶಿವಾನಂದ ಮೇತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ ಮಾತನಾಡಿದರು. ತಾಪಂ ಇಒ ವೈಜಣ್ಣ ಫುಲೆ, ಗ್ರಾಪಂ ಅಧ್ಯಕ್ಷೆ ಸೀತಾ ಸಂಜುಕುಮಾರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಂಜಯಕುಮಾರ ಕಾಂಗೆ, ಎಸ್‌ಡಿಎಂಸಿ ಅಧ್ಯಕ್ಷೆ ಮಹಾದೇವಿ ಹತ್ತೆ, ಪ್ರಮುಖರಾದ ಸೂರ್ಯಕಾಂತ ಅಡಕೆ, ರಾಜಪ್ಪ ನಂದೋಡೆ, ರವಿ ಬಿರಾದಾರ, ಜಗನ್ನಾಥ ಪತಂಗೆ, ರವಿ ಕಾದೇಪುರೆ, ಚನ್ನಬಸವ ಯರನಳ್ಳೆ, ಸಂಜು ತೆಲಂಗ, ಮಹೇಶ ಪಟ್ನೆ, ವಿಲಾಸ ಗುತ್ತೆ, ಚಂದ್ರಕಾಂತ ರಾಜೇಶ್ವರ ಇದ್ದರು. ಸೂರ್ಯಕಾಂತ ಪಾಟೀಲ್ ಸ್ವಾಗತಿಸಿದರು. ಕಾವೇರಿ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ ಪ್ರೋತ್ಸಾಹಿಸಲಾಯಿತು.