

ಔರಾದ್: ಶಾಸಕ ಪ್ರಭು ಚವ್ಹಾಣ್ ಇತ್ತೀಚೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಆವರಣದಲ್ಲಿ ಸಂಚರಿಸಿ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ, ತರಗತಿ ಕೋಣೆಗಳನ್ನು ವೀಕ್ಷಿಸಿದರು.
ಹುಲ್ಲು, ಕಸ-ಕಡ್ಡಿ ಬಿದ್ದಿರುವುದನ್ನು ಕಂಡು ಏಕೆ ಸ್ವಚ್ಛವಾಗಿಟ್ಟಿಲ್ಲ ಎಂದು ಪ್ರಾಂಶುಪಾಲರಿಗೆ ಖಾರವಾಗಿ ಪ್ರಶ್ನಿಸಿ, ಮುಂದಿನ ಸಲ ಬಂದಾಗ ಸಂಪೂರ್ಣ ಕಾಲೇಜು ಶುಚಿವಾಗಿ ಕಾಣಬೇಕು. ಶೌಚಗೃಹಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿ ಮೂಲಸೌಕರ್ಯ ಕೊರತೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಕಾಲೇಜು ಅಭಿವದ್ಧಿ ಸಮಿತಿ ಸಭೆ ನಡೆಸಿ ಕಾಲೇಜು ಸುಧಾರಣೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡಬೇಕಾದ ಕೆಲಸ-ಕಾರ್ಯಗಳ ಬಗ್ಗೆ ಪ್ರಾಂಶುಪಾಲರು ಮತ್ತು ಬೋಧಕರ ಜತೆ ಸುದೀರ್ಘ ಚರ್ಚೆ ನಡೆಸಿದರು.
ಪ್ರಾಂಶುಪಾಲರ ಕೋಣೆಯಲ್ಲಿ ಕುರ್ಚಿ, ಟೇಬಲ್ ಮತ್ತಿತರ ಉಪಕರಣಗಳು ಹಳೆಯದಾಗಿರುವುದನ್ನು ಕಂಡು ಕಾಲೇಜು ಅಭಿವೃದ್ಧಿಗೆ ಇರುವ ಅನುದಾನ ಏಕೆ ಬಳಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಚವ್ಹಾಣ್, ೩೦ ಲಕ್ಷ ರೂ. ಅನುದಾನ ನೀಡುತ್ತಿದ್ದು, ಅಗತ್ಯ ಉಪಕರಣಗಳನ್ನು ತರಿಸಿಕೊಳ್ಳಿ ಎಂದು ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಎಲ್ಲ ಬೋಧಕ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಪಠ್ಯ ಚಟುವಟಿಕೆಗಳ ಜತೆಗೆ ಕಾಲೇಜಿನ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಆಕರ್ಷಕ ಪ್ರವೇಶದ್ವಾರ, ಕಂಪೌಂಡ್ ಗೋಡೆ, ಆಟದ ಮೈದಾನ ನಿರ್ಮಿಸಿ ಕಾಲೇಜು ಸುಂದರವಾಗಿ ಕಾಣುವಂತೆ ಪ್ರಸ್ತಾವನೆ ಸಲ್ಲಿಸಿದರೆ ಹಂತ-ಹಂತವಾಗಿ ಒದಗಿಸುವುದಾಗಿ ಭರವಸೆ ನೀಡಿದರು.
ಕಾಲೇಜು ಆವರಣದಲ್ಲಿ ಕೆಲ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದು, ಎಲ್ಲೆಡೆ ಹೋಗಿ ಬರಲು ಅನುಕೂಲವಾಗುವಂತೆ ಹೊಸ ಸಿಸಿ ರಸ್ತೆಗಳನ್ನು ನಿರ್ಮಿಸಿಕೊಡಬೇಕೆಂದು ಪ್ರಾಂಶುಪಾಲರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಅಗತ್ಯ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಪ್ರಾಚಾರ್ಯೆ ಅಂಬಿಕಾ ಕೊತಮೀರ್ ಇತರರಿದ್ದರು.
ಅಧಿಕಾರಿ ತರಾಟೆಗೆ: ಹಿಂದಿನ ಸಭೆಯಲ್ಲಿ ಹೊಸ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಶಾಸಕರು ನಿರ್ದೇಶನ ನೀಡಿದ್ದರು. ಕಾಮಗಾರಿ ಅನುಮೋದನೆಗೊಂಡು ವರ್ಷವಾದರೂ ಇಂದಿಗೂ ನೀರಿನ ಸಮಸ್ಯೆ ಇತ್ಯರ್ಥ ಮಾಡದಿರುವುದಕ್ಕೆ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು. ತುರ್ತಾಗಿ ಕೊಳವೆಬಾವಿ ಕೊರೆಸಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಸಿಟಿ ಬಸ್ ಒದಗಿಸಿ: ಪದವಿ ಕಾಲೇಜಿನಲ್ಲಿ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ದೂರವಿರುವುದರಿಂದ ಪ್ರತಿದಿನ ಬಂದು ಹೋಗಲು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪದವಿ ಕಾಲೇಜು, ಡಿಪ್ಲೊಮಾ, ಐಟಿಐ ಒಳಗೊಂಡಂತೆ ಎಲ್ಲ ಶಾಲಾ-ಕಾಲೇಜುಗಳಿಗೆ ಹೋಗಲು ಅನುಕೂಲವಾಗುವಂತೆ ಪಟ್ಟಣದಲ್ಲಿ ಒಂದು ರೂಟ್ ಸಿದ್ಧಪಡಿಸಿ ಸಿಟಿ ಬಸ್ ಓಡಿಸಬೇಕು ಎಂದು ಸಭೆಯಲ್ಲಿ ಬಸ್ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ಇದೇ ವೇಳೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿ ಪಟ್ಟಣ ದೊಡ್ಡದಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಿಟಿ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.