

ಚಿತ್ರದುರ್ಗ: ಅತ್ಯಂತ ಪವಿತ್ರವಾದ ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಅಪವಿತ್ರಗೊಳಿಸಿದ್ದಾರೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಆರೋಪಿಸಿದರು.
ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಪರ ಬುಧವಾರ ನಗರದ ಡಾನ್‌ಬಾಸ್ಕೋ ಕಾಲೇಜಿನಲ್ಲಿ ಮತಯಾಚಿಸಿ ಮಾತನಾಡಿದರು.
ಶಿಕ್ಷಕರನ್ನು ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದು. ಆದರೆ, ನಾರಾಯಣಸ್ವಾಮಿ ಶಿಕ್ಷಕರಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಯಾವ ಸಮಸ್ಯೆಗಳನ್ನು ಬಗೆಹರಿಸದೆ 18 ವರ್ಷ ಕಾಲಹರಣ ಮಾಡಿದ್ದಾರೆ. ಇಂತಹವರು ಮರು ಆಯ್ಕೆ ಬಯಸಿ ಸ್ಪರ್ಧೆ ಮಾಡುವುದೇ ತಪ್ಪು ಎಂದು ಹೇಳಿದರು.
ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ನಾವೂ ಕೂಡ ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್ ಇತರರು ಇದ್ದರು.